ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಹಿನ್ನೆಲೆ: ಮಿಮ್ಸ್‌ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

5
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ.ಕುಮಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ ಮತ್ತು ಮರಿತಿಬ್ಬೇಗೌಡ ಡಯಾಲಿಸಿಸ್ ಸಮಸ್ಯೆ, ಕ್ಯಾನ್ಸರ್ ಆಸ್ಪತ್ರೆಯ ದುಸ್ಥಿತಿ ಸೇರಿದಂತೆ ಮಿಮ್ಸ್ ಅಧ್ವಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಮಸ್ಯೆಗಳ ಬಗ್ಗೆ ಸಮರ್ಪಕ ಉತ್ತರ ನೀಡುವಲ್ಲಿ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ವಿಫಲರಾದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಮಿಮ್ಸ್ ಸಮಸ್ಯೆ ಬಗ್ಗೆ ಪರಿಶೀಲಿಸಲು ಡಿಸಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಭೇಟಿ ನೀಡಿದರು. ಅದರಂತೆ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ಗರ್ಭಿಣಿಯರು ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿದರು. ಮೂಲ ಸೌಕರ್ಯದ ಬಗ್ಗೆ ಮಾಹಿತಿ ಪಡೆದು ವೈದ್ಯಕೀಯ ಸೇವೆಯ ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲನೆ ಮಾಡಿದರು. ಸ್ಥಳಾವಕಾಶದ ಕೊರತೆಯಿಂದ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಂತಹ ರೋಗಿಗಳು ಹಾಗೂ ಸಂಬಂಧಿಕರು ಕೂರಲು ಕುರ್ಚಿಗಳಿಲ್ಲದೆ ನೆಲದಲ್ಲಿ ಕುಳಿತುಕೊಳ್ಳುತ್ತಿದ್ದು, ಕೂಡಲೇ ಕಾಯಂ ಕುರ್ಚಿ ಹಾಕಿಸಿ. ಇನ್ನು ಮುಂದೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ನೆಲದಲ್ಲಿ ಕೂರದಂತೆ ನೋಡಿಕೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕ್ಯಾನ್ಸರ್ ಕೇರ್ ಸೆಂಟರ್‌ಗೆ ಸಂಬಂಧಪಟ್ಟಂತೆ ಉಳಿದ ಕಾಮಗಾರಿ ಮಾಡಲು 5 ಕೋಟಿ ರೂ ಅನುದಾನ ಬಿಡುಗಡೆಯಾಗಬೇಕಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಂತೆಯೇ ವಿವಿಧ ಕಾಯಿಲೆಗಳ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಉಪಕರಣ ಸಲಕರಣೆಗಳಿಗೆ ಸಂಬಂಧಪಟ್ಟಂತೆ 10 ಕೋಟಿ ರೂ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಿಮ್ಸ್ ನಿರ್ದೇಶಕ ಡಾ.ಬಿ.ಜೆ ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net