ಬೇಡಿದ್ದನ್ನು ಕರುಣಿಸುವ ಭಗವಂತ

13M.D.R.1
Published on

ಮದ್ದೂರು: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಸ್ವಚ್ಛಂದ ಪ್ರಕೃತಿ ಮಡಿಲಿನಲ್ಲಿರುವ ಶ್ರೀ ಮಲೆ ಮಹದೇಶ್ವರಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮಯಿಯಾಗಿದ್ದಾರೆ.


ಕನಸಿನ ಮಹದೇವ, ಪವಾಡ ಮಹದೇವ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಮಹದೇಶ್ವರಸ್ವಾಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ, ಜೀವನದಲ್ಲಿ ಕಷ್ಟಗಳನ್ನು ಹೋಗಲಾಡಿಸಿ, ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತೇನೆ ಎಂಬುವುದು ಭಕ್ತರ ನಂಬಿಕೆಯಾಗಿದೆ.


ಇಲ್ಲಿಗೆ ಬಂದು ಶುದ್ಧ ಮನಸಿನಿಂದ ಪೂಜೆ ಸಲ್ಲಿಸಿದರೆ ಮದುವೆಯಾಗದವರಿಗೆ ವಿವಾಹವಾಗುತ್ತದೆ, ಸಂತಾನ ಭಾಗ್ಯ ಸಿಗುತ್ತದೆ, ಆರೋಗ್ಯ ಭಾಗ್ಯ ಸಿಗುತ್ತದೆ. ವ್ಯಾಪಾರದಲ್ಲಿ ಲಾಭವಾಗುತ್ತದೆ ಎಂಬುದು ವಿಶ್ವಾಸ ಭಕ್ತರಲ್ಲಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರವಾದ ಭಕ್ತವೃಂದವಿದ್ದು, ಇಷ್ಟಾರ್ಥ ಈಡೇರಿದ ನಂತರ ಭಕ್ತರು ಆಗಮಿಸಿ ದೇವರಿಗೆ ಹರಕೆ ಸಲ್ಲಿಸುತ್ತಾರೆ.


ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ಧಾರ್ಮಿಕ ಕಾರ್ಯಕ್ರಮ ನಡೆಸಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತಿದೆ. ದೀಪಾವಳಿ ಹಬ್ಬದಲ್ಲಿ ಹಾಲರವಿ ಸೇವೆ ಮಾಡಿ ವಿಶೇಷ ಪೂಜಾ ಕೈಂಕರ್ಯ ನಡೆಸಿ ಸುತ್ತಮುತ್ತಲ ಸಾವಿರರು ಜನರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.


ಹೂ ನೀಡುವ ಸ್ವಾಮಿ: ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದಾಗ ಸ್ವಾಮಿ ಬಲಭಾಗದಿಂದ ಹೂ ನೀಡಿದರೆ ನಾವು ಅಂದುಕೊಂಡು ಕೆಲಸಗಳು ಶೀಘ್ರವಾಗಿ ಈಡೇರುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.


ಇತ್ತೀಚೆಗೆ ವ್ಯಕ್ತಿಯೊಬ್ಬರು ದೇಗುಲಕ್ಕೆ ಆಗಮಿಸಿ ನನ್ನ ಸಂಬಂಧಿಗೆ ಆರೋಗ್ಯ ಸಮಸ್ಯೆ ಇದ್ದು, ಸರಿಪಡಿಸಿ ಎಂದು ಹರಕೆ ಕಟ್ಟಿಕೊಂಡು ಹೋಗಿದ್ದರು. ಆ ವ್ಯಕ್ತಿಗೆ ಇಲ್ಲಿನ ಪ್ರಸಾದ ತಿನ್ನಿಸಿದ ನಂತರ ಗುಣಮುಖರಾದರು ಎನ್ನಲಾಗಿದೆ. ಭಕ್ತರು ಹರಕೆ ಕಟ್ಟಿಕೊಂಡು ಮನೆಗೆ ಬಂದಾದ ಕನಸಿನಲ್ಲಿ ಬಂದು ಹರಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.


ವರ್ಷದ ಹಿಂದೆ ದೇವಸ್ಥಾನ ಮುಂದಿರುವ ರಸ್ತೆಯಲ್ಲಿ ಮಟ್ಟ ಮಾಡುವಾಗ ಜೆಸಿಬಿ ಕೆಟ್ಟು ನಿಂತಿತು. ಏಕೆ ಕೆಟ್ಟು ಹೋಗಿದೆ ಎಂದು ಪರಿಶೀಲಿಸಿದಾಗ ರಸ್ತೆ ಮಟ್ಟ ಜಾಗದಲ್ಲಿ ಭಾನುಗುಡ್ಡ ಮಹದೇಶ್ವರ ಸ್ವಾಮಿ ಇರುವುದು ಕಂಡುಬಮತು. ಜತೆಗೆ ತಗಡು ಚಕ್ರದಲ್ಲಿ ಸಿಕ್ಕಿತು. ಇದರಲ್ಲಿ ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡಿಸಬೇಕು ಎಂದು ಬರೆದಿತ್ತು. ಇದನ್ನು ಯದುವೀರ್ ಅವರಿಗೆ ತಿಳಿಸಿದಾಗ ಕಳೆದ ವರ್ಷ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.


ಭಕ್ತರೊಬ್ಬರಿಗೆ ಕನಸಿನಲ್ಲಿ ದೇಗುಲದ ಆವರಣದಲ್ಲಿ ಶ್ರೀ ಮಹದೇಶ್ವರಸ್ವಾಮಿ ದನಗಳ ಜಾತ್ರೆಯನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದಂತೆ ಭಾಸವಾಗಿದೆ. ಅದರಂತೆ 3 ವರ್ಷಗಳಿಂದ ದೇಗುಲದ ಆವರಣದಲ್ಲಿ ಗ್ರಾಪಂ ಹಾಗೂ ಗ್ರಾಮಸ್ಥರ ಸಹಕಾರದಿಂದ ಭಾರಿ ದನಗಳ ಜಾತ್ರೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ದನಗಳ ಜಾತ್ರೆಗೆ ಜಿಲ್ಲೆಯ ಹಲವಾರು ತಾಲೂಕಿಗಳಿಂದ ಸಾವಿರಾರು ರಾಸುಗಳು ಆಗಮಿಸುವುದು ವಿಶೇಷವಾಗಿದೆ. ಈ ಬಾರಿಯೂ ದನಗಳ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ.


39 ವರ್ಷಗಳ ಹಿಂದೆ ಬಿದರುಕೋಟೆ ಗ್ರಾಮದ ಪಾಲಾಕ್ಷಮ್ಮ ಮತ್ತು ಚಿಕ್ಕಲಿಂಗಯ್ಯ ದಂಪತಿ ಕನಸಿನಲ್ಲಿ ಅವರ ಜಮೀನಿನಲ್ಲಿ ಕಲ್ಲಿನ ಗುಡ್ಡೆ ಮೇಲೆ ಸರ್ಪವೊಂದು ನಾಟ್ಯವಾಡುತ್ತಿತ್ತು. ನಂತರದ ದಿನಗಳಲ್ಲಿ ಈ ಪ್ರಕ್ರಿಯೆ ಪ್ರತಿದಿನವೂ ನಡೆಯುತಿತ್ತು. ಇದರಿಂದ ಆತಂಕಗೊಂಡ ದಂಪತಿ ಶಾಸ್ತ್ರ ಕೇಳಿದಾಗ ಆ ಸ್ಥಳದಲ್ಲಿ ದೈವ ನೆಲೆಸಿದ್ದಾನೆ. ಅದು ದೈವ ಭೂಮಿ, ಆದ್ದರಿಂದ ಅಲ್ಲಿ ಮಹದೇಶ್ವರ ದೇವಸ್ಥಾನ ಹಾಗೂ ಅನ್ನದಾಸೋಹ ಮಂಟಪವನ್ನು ಕಟ್ಟಿಸುವಂತೆ ಹಾಗೂ ಮೈಸೂರು ರಾಜ ವಂಶಸ್ಥರಿಂದ ಪ್ರಥಮ ಪೂಜೆ ಸಲ್ಲಿಸಬೇಕು ಎಂಬ ಸೂಚನೆ ಬಂತು. ಹಾಗಾಗಿ, ಮಹದೇಶ್ವರ ಸ್ವಾಮಿ ದೇವಾಲಯ ನಿರ್ಮಿಸಿ ರಾಜವಂಶಸ್ಥರು ಪ್ರತಿವರ್ಷ ಪ್ರಥಮ ಪೂಜೆ ಮಾಡಿಸಬೇಕು ಎಂದು ಹೇಳಿದ್ದರು ಎಂಬ ಮಾಹಿತಿ ಇದೆ. ದೈವ ಸ್ಥಳವಾಗಿರುವುದರಿಂದ ಈಗಲೂ ಸರ್ಪ ಸಂಚರಿಸುತ್ತದೆ ಎಂಬ ನಂಬಿಕೆಯಿದೆ.


ಚೊಟ್ಟನಹಳ್ಳಿ ಗ್ರಾಮದಲ್ಲಿ ಶ್ರೀಮಲೆ ಮಹದೇಶ್ವರ ಸ್ವಾಮಿ 39ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 3ನೇ ವರ್ಷದ ಭಾರಿ ದನಗಳ ಜಾತ್ರೆಯನ್ನು ಏರ್ಪಡಿಸಲಾಗಿದೆ.


ಮಾ.18ರಂದು ಮಹದೇಶ್ವರಸ್ವಾಮಿ ಪೂಜೆ ಮತ್ತು ಅನ್ನದಾನ, 19ರಂದು ರಾಸುಗಳ ಮೆರವಣಿಗೆ, 20ರಂದು ಮೃತ್ಯುಂಜಯ ಸ್ವಾಮಿಗೆ ಪೂಜಾ ಕಾರ್ಯಕ್ರಮ, 21ರಂದು ವರ್ತೂರು ಸಂತೋಷ್ ಆಗಮನ, ದೇಶಹಳ್ಳಿ ಶ್ರೀ ಕೊಳ್ಳಿ ಕೊಡುಗೆ ಆದಿಶಕ್ತಿ ಬಸವಣ್ಣನ ಮೆರವಣಿಗೆ, 22ರಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ವಿಶೇಷ ಪೂಜೆ ಹಾಗೂ ಶಾಂತಮಲ್ಲಿಕಾರ್ಜುನ ಸ್ವಾಮಿ ಆಗಮನ, 23ರಂದು ಕಡಲೇಪುರಿ ಅಭಿಷೇಕ ಮತ್ತು ರಾಸುಗಳ ಆಯ್ಕೆ ಕಾರ್ಯಕ್ರಮ, 24ರಂದು ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ನಿರ್ಮಲಾ ದೇವರಾಜು, ಪ್ರಧಾನ ಅರ್ಚಕ ಬಿ.ಸಿ.ದೇವರಾಜು ತಿಳಿಸಿದ್ದಾರೆ.

ಮಾರ್ಗ: ಚೊಟ್ಟನಹಳ್ಳಿ ಗ್ರಾಮದಲ್ಲಿರುವ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೆಸಗರಹಳ್ಳಿಯಿಂದ 5 ಕಿಮೀ, ಹೊಡೆಘಟ್ಟದಿಂದ 3 ಕಿಮೀ, ಕೊಪ್ಪದಿಂದ 5 ಕಿಮೀ, ಕೆರಗೋಡಿನಿಂದ 6 ಕಿ.ಮೀ. ದುರ ಇದೆ.

ದೇಗುಲಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದಕ್ಕೆ ಹಲವಾರು ನಿದರ್ಶನಗಳು ಕಣ್ಮುಂದೆ ಇದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ನಿರ್ಮಲಾ ದೇವರಾಜು ಅಧ್ಯಕ್ಷೆ, ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಚೊಟ್ಟನಹಳ್ಳಿ

ಶ್ರೀ ಮಲೆ ಮಹದೇಶ್ವರಸ್ವಾಮಿ ಬೇಡಿದ್ದನ್ನು ಕರುಣಿಸುವ ಕರುಣಾಮಯಿ. ಇಲ್ಲಿಗೆ ಬಂದು ಪೂಜೆ ಮಾಡಿಸಿದರೆ ಇಷ್ಟಾರ್ಥಗಳು ಈಡೇರುವ ಜತೆಗೆ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರಕುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಬಿ.ಸಿ.ದೇವರಾಜು ಪ್ರಧಾನ ಅರ್ಚಕ, ಚೊಟ್ಟನಹಳ್ಳಿ

ಮಲೆ ಮಹದೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ 3 ವರ್ಷಗಳಿಂದ ಭಾರಿ ದನಗಳ ಜಾತ್ರೆ ನಡೆಯುತ್ತಿದೆ. ಇಲ್ಲಿಗೆ ವಿವಿಧೆಡೆಯಿಂದ ಸಾವಿರಾರು ರಾಸುಗಳು ಆಗಮಿಸುತ್ತವೆ. ಇಲ್ಲಿನ ದೇವರು ಅತ್ಯಂತ ಪ್ರಭಾವ ಹೊಂದಿದ್ದು, ಬೇಡಿದ್ದನ್ನು ಕರುಣಿಸುವ ದೈವ ಎಂದೇ ಪ್ರಸಿದ್ಧಿ ಹೊಂದಿದೆ.
ಎಂ.ಚಂದ್ರಶೇಖರ್ ಚೊಟ್ಟನಹಳ್ಳಿ ಭಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net