ಬೆಳ್ಳಂಬೆಳಗ್ಗೆ ಜಮೀನಿನಲ್ಲಿ ಗಜಪಡೆ ವಾಕಿಂಗ್..!

1129112
Published on

ಮಂಡ್ಯ: ಮದ್ದೂರು ತಾಲೂಕಿನ‌ ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇ ಮರದದೊಡ್ಡಿ ಗ್ರಾಮಗಳ ಸರಹದ್ದಿನಲ್ಲಿ 3 ಕಾಡಾನೆಗಳು ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ರೈತರ ಜಮೀನಿನಲ್ಲಿ ಕಾಣಿಸಿಕೊಂಡಿರೋ ಈ ಕಾಡಾನೆಗಳು ರೈತರ ಜಮೀನಿನಲ್ಲಿನ ಫಸಲು ತುಳಿದು ಹಾಳು ಮಾಡುತ್ತಿವೆ. ಮತ್ತೊಂದೆಡೆ ಹಳ್ಳಿಯ ಕಡೆ ಬಂದರೆ ಎನ್ನುವ ಆತಂಕ ಎದುರಾಗಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಈ ಕಾಡಾನೆಗಳನ್ನು ಓಡಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಜನರು ಜಾಗೃತಿಯಿಂದ ಇರುವಂತೆ ತಿಳಿಸಿ ರೈತರು ಜಮೀನಿನ ಕಡೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಕೂಳಗೆರೆ, ಬನ್ನಹಳ್ಳಿ , ಕೆ.ಬೆಳ್ಳೂರು ಗ್ರಾಮಗಳ ಬಳಿ ಆನೆಗಳು ಬೀಡುಬಿಟ್ಟಿದ್ದವು. ಅರಣ್ಯಾಧಿಕಾರಿಗಳು ಮಳವಳ್ಳಿ ತಾಲೂಕಿನ ಹಲಗೂರು ಕಡೆ ಇರುವ ಕಾಡಿಗಟ್ಟಿಸಿದ್ದರು.

ಮಂಗಳವಾರ ಮುಂಜಾನೆ ಶಿಂಷಾ ನದಿ ಮೂಲಕ ಆಗಮಿಸಿರುವ ಆನೆಗಳು ಮದ್ದೂರು ಪಟ್ಟಣದ ಸಮೀಪದಲ್ಲೇ ಬೀಡು ಬಿಟ್ಟಿವೆ. ಈ ಆನೆಗಳು ಮುತ್ತತ್ತಿಯ ಶಿಂಷಾ ಅರಣ್ಯ ಪ್ರದೇಶದಿಂದ ಈ ಕಾಡಾನೆಗಳು ಬಂದಿರಬೇಕೆಂದು ಶಂಕಿಸಲಾಗಿದ್ದು, ಆನೆಯನ್ನು ಮತ್ತೆ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net