

ಮಂಡ್ಯ: ಪೊಲೀಸ್ ಆದವರು ಎಂದಿಗೂ ಪಕ್ಷಪಾತದ ನಿಲುವು ಹೊಂದಿರಬಾರದು ಮತ್ತು ಯಾರನ್ನೂ ಓಲೈಸಬಾರದು. ಹಾಗೆಯೇ ಪೊಲೀಸರು ಸಾಮಾನ್ಯ ಜನರ ಸೇವಕನಾಗಿರಬೇಕೋ ಹೊರತು ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಗುಲಾಮನಾಗಿರಬಾರದು. ಆದರೆ, ಜನರು ನಾಚಿಕೆ ಪಡುವಂತಹ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಸಬ್ಇನ್ಸ್ಪೆಕ್ಟರ್ ಒಬ್ಬರು ಸರ್ವೆಂಟ್ ಆಗಿ ಕೆಲಸ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಮಯೂರ ಹೋಟೆಲ್ನಲ್ಲಿ ನಡೆದಿದೆ. ಬಿಜೆಪಿ ಮುಖಂಡರಿಗೆ ಹಾಗೂ ಅಧಿಕಾರಿಗಳಿಗೆ ಎಸ್ಐ ಊಟ ಬಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಶನಿವಾರ ಗಣಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ರೇಷ್ಮೆ ಖಾತೆ ಸಚಿವ ನಾರಾಯಣಗೌಡ ಪ್ರವಾಸ ಕೈಗೊಂಡಿದ್ದ ವೇಳೆ ಈ ಪ್ರಸಂಗ ಜರುಗಿದೆ. ಬಿಜೆಪಿ ಮುಖಂಡರು ಮತ್ತು ಅಧಿಕಾರಿಗಳು ಸಚಿವರ ಜತೆಗೆ ಊಟಕ್ಕೆ ಕುಳಿತಿದ್ದರು. ಈ ವೇಳೆ ಸಮವಸ್ತ್ರ ಧರಿಸಿಕೊಂಡೇ ಕೆಆರ್ಎಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಗೌಡ ಉಣಬಡಿಸಿದ್ದಾರೆ.
ಓರ್ವ ಪಿಎಸ್ಐ ಆಗಿ ಪೊಲೀಸ್ ಸಮವಸ್ತ್ರ ಧರಿಸಿ ಈ ರೀತಿ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಇದೀಗ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಪಿಎಸ್‌ಐ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ರೀತಿ ಮಾಡಿದ್ರೆ ಜನ ಸಾಮಾನ್ಯರು ಪೊಲೀಸರ ಮೇಲೆ ನಂಬಿಕೆ ಇಡೋದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)