ಕಸಾಪ ರಾಜಕೀಯ ದುಡಿದವರಿಗೆ ಗೇಟ್‌ಪಾಸ್: ನುಡಿಜಾತ್ರೆ ಯಶಸ್ವಿಗೆ ಸೇವೆ ಸಲ್ಲಿಸಿದವರಿಗಿಲ್ಲ ಮಾನ್ಯತೆ

Mandya Kannada Sahitya Parishad in controversy Mandya
Published on

ಮಂಡ್ಯ: ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಘಮಲು ಇನ್ನೂ ಮರೆಯಾಗಿಲ್ಲ. ಅದಾಗಲೇ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ರಾಜಕೀಯದಾಟ ಶುರುವಾಗಿದ್ದು, ಜಿಲ್ಲಾ ಕಸಾಪದಲ್ಲಿದ್ದ ಹಾಲಿ ಪದಾಧಿಕಾರಿಗಳಿಗೆ ರಾತ್ರೋರಾತ್ರಿ ಗೇಟ್‌ಪಾಸ್ ಕೊಟ್ಟು ಹೊಸದಾಗಿ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ.

ನುಡಿಜಾತ್ರೆ ಮುಗಿದು ಎರಡು ದಿನ ಆಗುವುದರೊಳಗೆ ಜಿಲ್ಲಾ ಕಸಾಪದಲ್ಲಿ ನಾಲ್ವರನ್ನು ಹೊರತುಪಡಿಸಿ ಉಳಿದ ಪದಾಧಿಕಾರಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಮಾತ್ರವಲ್ಲದೆ ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರಿಗೆ ಹುದ್ದೆ ನೀಡುವಲ್ಲಿ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಯಶಸ್ವಿಯಾಗಿದ್ದಾರೆ.

ಕಸಾಪ ಜಿಲ್ಲಾಧ್ಯಕ್ಷರಾಗಿದ್ದ ರವಿಕುಮಾರ್ ಚಾಮಲಾಪುರ ಅಕಾಲಿಕ ನಿಧನರಾದ ಬಳಿಕ ಯಾರನ್ನೂ ಆ ಹುದ್ದೆಗೆ ನೇಮಕ ಮಾಡಿರಲಿಲ್ಲ. ಈ ನಡುವೆಯೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕಾದ ಹಿನ್ನೆಲೆಯಲ್ಲಿ ಸಂಚಾಲಕರಾಗಿ ಡಾ.ಮೀರಾ ಶಿವಲಿಂಗಯ್ಯ ಅವರನ್ನು ನಿಯೋಜಿಸಲಾಯಿತು. ಈಗಾಗಲೇ ಜಿಲ್ಲಾ ಕಸಾಪ ಹುದ್ದೆಯನ್ನು ನಿರ್ವಹಣೆ ಮಾಡಿದ ಮೀರಾ ಅವರು ಸಂಚಾಲಕಿ ಹುದ್ದೆ ಹಾಗೂ ತಮಗೆ ಕೊಟ್ಟಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪ್ರತಿ ಸಮಿತಿಯಲ್ಲಿಯೂ ತೊಡಗಿಸಿಕೊಂಡಿದ್ದರು. ಈ ನಡುವೆ ಹಲವು ಸಭೆಯಲ್ಲಿ ಮೀರಾ ಅವರಿಗೆ ಮಹೇಶ ಜೋಶಿ ಅವರು ಅವಮಾನ ಮಾಡಿದ್ದಾರೆನ್ನುವ ಆರೋಪವೂ ಇದೆ. ಆದಾಗ್ಯೂ ಎಲ್ಲವನ್ನೂ ಬದಿಗೆ ಸರಿಸಿ ಸಮ್ಮೇಳನದ ಯಶಸ್ಸಿಗೆ ಮೀರಾ ಶ್ರಮಿಸಿದರು. ಇವರೊಟ್ಟಿಗೆ ಗೌರವ ಕಾರ್ಯದರ್ಶಿ ಹರ್ಷ ವಿ.ಪಣ್ಣೆದೊಡ್ಡಿ ಸೇರಿದಂತೆ ಹಲವರು ನುಡಿಜಾತ್ರೆಗೆಂದು ಟೊಂಕಕಟ್ಟಿ ಕೆಲಸ ಮಾಡಿದ್ದಾರೆ.

ಆದರೆ ಈ ಎಲ್ಲವನ್ನೂ ಮರೆತು ಏಕಾಏಕಿ ಹುದ್ದೆಯಿಂದ ಬಿಡುಗಡೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಹೇಶ ಜೋಶಿ ಅವರು ಕನಿಷ್ಟ ಒಂದು ಕಾರ್ಯಕ್ರಮ ಆಯೋಜಿಸಿ ಧನ್ಯವಾದ ಹೇಳುವ ಸೌಜನ್ಯವನ್ನು ತೋರಿಲ್ಲವೆನ್ನುವ ಅಸಮಾಧಾನ ಸೃಷ್ಟಿಯಾಗಿದೆ. ಇದಲ್ಲದೆ ನಾಲ್ವರಿಗೆ ಹುದ್ದೆ ನೀಡಲಾಗಿದ್ದು, ಇದರ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಜೋಶಿ ಅವರ ನಡೆ ಬಗ್ಗೆ ಜಿಲ್ಲೆಯ ಹಲವರು ಟೀಕಿಸಿದ್ದರು. ಇದಕ್ಕೆ ಜೋಶಿ ಪರವಾಗಿ ಮುದ್ದೇಗೌಡ ಬ್ಯಾಟಿಂಗ್ ಮಾಡುತ್ತಿದ್ದರು. ಒಟ್ಟಾರೆ ಕಸಾಪದಲ್ಲಿನ ಕೆಸರೆರಚಾಟ ಮುಂದಿನ ದಿನದಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net