ಹೆಚ್ಚು ಕನ್ನಡ ಬಳಸುವ ಜಿಲ್ಲೆ ಮಂಡ್ಯ

14mlk1
ಮೇಲುಕೋಟೆಯಲ್ಲಿ 87ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಶನಿವಾರ ದೇವಾಲಯದ ಬಳಿ ಗ್ರಾಪಂ ಅಧ್ಯಕ್ಷೆ ಮಣಿಮುಗನ್, ಉಪಾಧ್ಯಕ್ಷ ಜಿ.ಕೆ. ಕುಮಾರ್, ವಾದ್ಯಾರ್ ತಿರುಮಲೆ ಸ್ವಾಗತ ನೀಡಿದರು.
Published on

ಮೇಲುಕೋಟೆ: ಭಾರತದ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆ ಕನ್ನಡಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ವಿ. ವೆಂಕಟರಾಮೇಗೌಡ ಹೇಳಿದರು. ಮೇಲುಕೋಟೆಗೆ ಶನಿವಾರ ಆಗಮಿಸಿದ 87ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ಸ್ವಾಗತ ಕೋರಿ ಮಾತನಾಡಿದರು.

ಕನ್ನಡದ ಮೊದಲ ಗೀತರೂಪಕ ರಚನೆಕಾರ, ಶ್ರೇಷ್ಠ ಕವಿಯೂ ಆದ ಪು.ತಿ.ನ. ಪದ್ಮಶ್ರೀ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹುಟ್ಟೂರು ಜಿಲ್ಲೆ ಹಾಗೂ ಕರುನಾಡಿಗೆ ಕೀರ್ತಿ ತಂದಿದ್ದಾರೆ. ನಮ್ಮೂರಿನ ಕನ್ನಡ ಪತ್ರಿಕಾ ಲೋಕದ ದಿಗ್ಗಜ ಖಾದ್ರಿ ಶಾಮಣ್ಣ ಸಹ ಸೇವೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಪ್ರಾತಃಸ್ಮರಣೀಯರನ್ನು ನೆನೆಯುವ ಕಾರ್ಯ ನಡೆಯಬೇಕು. ಮೇಲುಕೋಟೆಯ ಶತಮಾನದ ಸರ್ಕಾರಿ ಪ್ರಾಥಮಿಕ ಶಾಲೆ, ಸಂಸ್ಕೃತ ಮಹಾಪಾಠ ಶಾಲೆ ಗ್ರಂಥಾಲಯಗಳು ಇವೆ. ಅವುಗಳ ಬಲವರ್ಧನೆಯಾಗಬೇಕಾದ ಅಗತ್ಯವಿದೆ. ಮಂಡ್ಯ ಜಿಲ್ಲೆ ಹೆಚ್ಚು ಕನ್ನಡ ಬಳಸುವ ಜಿಲ್ಲೆಯಾಗಿದ್ದು, ಇಲ್ಲಿ ನಡೆಯುವ 87ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕಾದರೆ ಎಲ್ಲರೂ ಭಾಗಿಯಾಗಬೇಕು ಎಂದರು.

ಚೆಲುವನಾರಾಯಣಸ್ವಾಮಿ ದೇವಾಲಯದ ವತಿಯಿಂದ ಸಾಹಿತ್ಯ ಪ್ರಚಾರ ರಥಕ್ಕೆ ಪೂಜೆ ನೆರವೇರಿಸಿದ ಗ್ರಾಪಂ ಸದಸ್ಯ ವಾದ್ಯಾರ್ ತಿರುಮಲೆ ಮಾತನಾಡಿ, ಮಂಡ್ಯ ಜಿಲ್ಲಾಡಳಿತ ಸರ್ಕಾರದ ಸಹಕಾರದಲ್ಲಿ ಸಮ್ಮೇಳನಕ್ಕೆ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡಿದೆ. ಮೂರು ದಿನದಲ್ಲಿ ಒಂದು ದಿನವಾದರೂ ಸಾಹಿತ್ಯ ಸಮ್ಮೇಳನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸಾಹಿತ್ಯಾಸಕ್ತರು ಸ್ಮಾರಕಗಳ ತವರು ಮೇಲುಕೋಟೆಗೆ ಬಂದಾಗ ಅವರೊಡನೆ ಸೌಹಾರ್ದಯುವಾಗಿ ನಡೆದುಕೊಂಡು ಮೇಲುಕೋಟೆಯ ಸ್ಮಾರಕಗಳ ಮಹತ್ವದ ಮಾಹಿತಿಯನ್ನು ಅವರಿಗೆ ತಿಳಿಸಬೇಕು ಎಂದರು.

ಗ್ರಾ.ಪಂ. ಅಧ್ಯಕ್ಷೆ ಮಣಿಮುಗನ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ವೀರಾಂಜನೇಯಸ್ವಾಮಿ ಅರ್ಚಕ ಚಂದುಭಾರದ್ವಾಜ್, ಮುಖ್ಯಶಿಕ್ಷಕ ವಸಂತಕುಮಾರ್, ಎಸ್.ಎನ್. ಸಂತಾನರಾಮನ್ ಯದುಶೈಲ ಪ್ರೌಢಶಾಲೆ, ಸರ್ಕಾರಿ ಬಾಲಕರು ಮತ್ತು ಬಾಲಕಿಯರ ಶಾಲೆಯ ಶಿಕ್ಷಕ ವೃಂದ, ಮಕ್ಕಳು ನಾಗರೀಕರು ಭಾಗವಹಿಸಿದ್ದರು. ಸಾಹಿತ್ಯ ಪ್ರಚಾರ ರಥ ದೇವಾಲಯದ ಪ್ರದಕ್ಷಿಣೆಮಾಡಿ ಕೆ.ಆರ್.ಪೇಟೆಯತ್ತ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net