

ಮಾಯಕೊಂಡ: 3 ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಹೋಬಳಿಯ ಕೊಡಗನೂರು ಕೆರೆ ಏರಿಯ ಸ್ವಲ್ಪ ಭಾಗ ಕುಸಿತ ಕಂಡಿತ್ತು. ಅಲ್ಲದೇ ಏರಿಯ ಮೇಲೆ ಹಾದು ಹೋಗಿರುವ ಮಂಡ್ಯ- ಹಡಗಲಿ ರಾಜ್ಯ 47 ಹೆದ್ದಾರಿಯ ಸಂಚಾರ ರದ್ದಾಗಿತ್ತು. ಆದರೆ ಮೂರು ವರ್ಷವಾದರೂ ಶಾಶ್ವತ ದುರಸ್ತಿ ಮಾಡಿಸಿಲ್ಲ.
ಕೆರೆ ಏರಿ ರಸ್ತೆ ಸಮೇತ ಕುಸಿತವಾಗಿರುವ ಸುದ್ದಿಯನ್ನು ತಿಳಿದು ಅಂದಿನ ಶಾಸಕ ಪ್ರೊ.ಎನ್. ಲಿಂಗಣ್ಣ, ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಸಣ್ಣ ನೀರಾವರಿ ಲೋಕೋಪಯೋಗಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆ ತುಂಬಿದ್ದರಿಂದ ಶಾಶ್ವತ ದುರಸ್ತಿ ಕಷ್ಟ ಸಾಧ್ಯ. ಆದ್ದರಿಂದ ಉಸುಕಿನ(ಮರಳು) ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ಏರಿಯನ್ನು ಭದ್ರಪಡಿಸಲು ತೀರ್ಮಾನ ಮಾಡಿ ಒಂದೆರಡು ದಿನದಲ್ಲಿ ಕೆರೆಯ ಏರಿಯ ನೀರಿನ ಒಳ ಭಾಗಕ್ಕೆ ಸಾವಿರಾರು ಉಸುಕಿನ ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು.
ದಾವಣಗೆರೆ ತಾಲೂಕಿನ ಎರಡನೇ ಅತಿ ದೊಡ್ಡ ಕೆರೆಯೆಂದು ಗುರುತಿಸಲ್ಪಟ್ಟಿದ್ದು, ಮಂಡ್ಯ- ಹಡಗಲಿ ರಾಜ್ಯ 47 ಹೆದ್ದಾರಿ ಹಾದು ಹೋಗಿರುವುದರಿಂದ ಪ್ರತಿನಿತ್ಯ ಈ ರಸ್ತೆಯ ಮೂಲಕ ಹೊಸದುರ್ಗ ಮಾರ್ಗವಾಗಿ ಬೆಂಗಳೂರು, ಮೈಸೂರು, ಅರಸಿಕೆರೆ, ಹಾಸನ, ಧರ್ಮಸ್ಥಳ ಹಾಗೂ ಇತರೆ ನಗರಗಳಿಗೆ ಹೋಗುವ ಬಸ್ಗಳು ಮತ್ತು ನೂರಾರು ಬಾರಿ ವಾಹನಗಳು ಸಂಚರಿಸುತ್ತವೆ. ಕೆರೆಯ ಏರಿ ಕುಸಿತವಾದ ಸ್ಥಳದಲ್ಲಿ ಜೀವ ಕೈಲಿಡಿದು ಸಂಚರಿಸುವ ಪರಿಸ್ಥಿತಿ ಇದೆ. ವಾಹನ ಚಾಲಕರಂತೂ ಕಷ್ಟಪಟ್ಟು ವಾಹನಗಳನ್ನು ಮುನ್ನಡೆಸುವ ಸ್ಥಿತಿ ಎದುರಾಗಿದೆ.
ಶಾಶ್ವತ ದುರಸ್ತಿ ಬಗ್ಗೆ ಚಿಂತಿಸುತ್ತಿಲ್ಲ: ಕೆರೆ ಏರಿಯ ತಾತ್ಕಾಲಿಕ ದುರಸ್ತಿ ಮಾಡಿದ ನಂತರ ದೊಡ್ಡ ಮಣ್ಣಿನ ರಾಶಿ ಹಾಗೆ ಬಿದ್ದಿವೆ. ಭಾರಿ ವಾಹನಗಳು ಹರಸಾಹಸ ಪಟ್ಟು ಸಂಚರಿಸಬೇಕಿದೆ. ಶಾಸಕ, ಜಿಲ್ಲಾಧಿಕಾರಿ, ನೀರಾವರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೇ ಮಾರ್ಗದಲ್ಲಿ ಸಂಚರಿಸಿದರೂ ಶಾಶ್ವತ ದುರಸ್ತಿ ಬಗ್ಗೆ ಚಿಂತಿಸುತ್ತಿಲ್ಲ ಎಂಬುದು ಸಾರ್ವಜನಿಕರ ಮತ್ತು ಸವಾರರ ಅಭಿಪ್ರಾಯವಾಗಿದೆ.