ಗ್ರಾ.ಪಂ ಚುನಾವಣೆ: ಪತ್ನಿ ಅವಿರೋಧ ಆಯ್ಕೆಗೆ 25 ಲಕ್ಷ ರೂ. ಭರವಸೆ ನೀಡಿದ ತಹಸೀಲ್ದಾರ್!​

Mandya
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಭರಾಟೆ ಜೋರಾಗಿದ್ದು, ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಕಸರತ್ತು ನಡೆದಿದೆ.

ಇಂದಿನಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ ಆಗಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಗಾಗಿ ಮಂಡ್ಯದ ಬಹುತೇಕ ಹಳ್ಳಿಗಳಲ್ಲಿ ಅಭ್ಯರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆಯುತ್ತಿರುವ ಮಾಹಿತಿ ತಿಳಿದುಬಂದಿದೆ. ಗ್ರಾಮದ ಅಭಿವೃದ್ಧಿಗೆ ಹಣ ಪಡೆದು ಅಭ್ಯರ್ಥಿಯ ಆಯ್ಕೆಗೆ ಮುಖಂಡರು ಮುಂದಾಗಿದ್ದಾರೆ.

ಕೆರಗೋಡು ಗ್ರಾ.ಪಂ ವ್ಯಾಪ್ತಿಯ ಹಳ್ಳಿಯೊಂದಕ್ಕೆ ತಹಸೀಲ್ದಾರ್​ ಒಬ್ಬರು ಹಣದ ಭರವಸೆ ನೀಡಿದ್ದು, ತಮ್ಮ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದರೆ ಗ್ರಾಮದ ದೇವಾಲಯ ಅಭಿವೃದ್ಧಿಗೆ 25ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 2 ಸ್ಥಾನಗಳ ಹರಾಜು ಹಾಕಲಾಗಿದೆ. ಸಾಮಾನ್ಯ ಪುರುಷನಿಗೆ 7.50 ಲಕ್ಷ ರೂ. ಮತ್ತು ಸಾಮಾನ್ಯ ಮಹಿಳೆಗೆ 5.20 ಲಕ್ಷ ರೂ. ಕೊಡಲು ಆಕಾಂಕ್ಷಿಗಳ‌ ಒಪ್ಪಿಗೆ ನೀಡಿದ್ದಾರೆ.

ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್‌ವೊಂದರ ಆಕಾಂಕ್ಷಿ ಅವಿರೋಧ ಆಯ್ಕೆಯಾಗಲು ಸ್ಮಶಾನಕ್ಕೆ 8 ಗುಂಟೆ ಜಾಗ ಕೊಡಲು ಒಪ್ಪಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net