

ಬೆಂಗಳೂರು: ರಾಜ್ಯದಾದ್ಯಂತ 1 ರಿಂದ 10ನೇ ತರಗತಿಯವರೆಗಿನ ಶಾಲೆಗಳು ಸೋಮವಾರ ಆರಂಭವಾಗಲಿದೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ತಳಿರು, ತೋರಣಗಳು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಮಕೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಲಿಕಾ ಚೇತರಿಕೆ ಹಾಗೂ 2022&23 ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಚಾಲನೆ ನೀಡುವ ಜತೆಯಲ್ಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲಕರು ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಕ್ಷೀರಭಾಗ್ಯ ಜತೆಗೆ, ಮಧ್ಯಾಹ್ನದ ಬಿಸಿಯೂಟ ಕೂಡ ನೀಡಲಾಗುತ್ತದೆ.
ಮಳೆಬಿಲ್ಲಿನ ರಂಗು: ಕೋವಿಡ್ ಕಾರಣದಿಂದಾಗಿ ಮನೆಯಲ್ಲೇ ಹೆಚ್ಚು ಕಾಲ ಕಳೆದಿರುವ ಮಕ್ಕಳು ಶಾಲೆಗೆ ಬಂದ ತಕ್ಷಣ ಪಾಠಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂದು ಅರಿತಿರುವ ಶಿಕ್ಷಣ ಇಲಾಖೆ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸುವುದಕ್ಕಾಗಿ ಶಾಲಾರಂಭದ ಎರಡು ವಾರಗಳ ಕಾಲ "ಮಳೆಬಿಲ್ಲು' ಎಂಬ ಕಾರ್ಯಕ್ರಮ ರೂಪಿಸಿದೆ.
ದಾಖಲಾತಿಗಾಗಿ ನೂಕುನುಗ್ಗಲು
| ಕೆ.ಎನ್.ರಾವೇಂದ್ರ ಮಂಡ್ಯ
ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳನ್ನು ದಾಖಲಿಸಲು ಪಾಲಕರು ಮುಗಿಬಿದ್ದಿದ್ದಾರೆ. ಪರಿಣಾಮ ಬಹುತೇಕ ಸೀಟ್ ಭರ್ತಿಯಾಗಿವೆ. ಬಹಳ ವರ್ಷಗಳ ಹಿಂದಿನಿಂದಲೂ ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಇದೆ. ಕಾರಣ ಈ ಶಾಲೆಯಲ್ಲಿರುವ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆ. ಅದನ್ನು ಶಾಲೆಯ ದಾಖಲೆಗಳು ಸಾಕ್ಷೀಕರಿಸುತ್ತವೆ. ಈ ನಡುವೆ ಕರೊನಾದಿಂದಾಗಿ ಹಳ್ಳಿ ಸೇರಿರುವವರು ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಪ್ರತಿಷ್ಠಿತ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂಟನೇ ತರಗತಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮಕ್ಕೆ ತಲಾ 75 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಆದರೆ, ಈಗಾಗಲೇ ಅಂದರೆ ಮೇ 15ರ ವೇಳೆಗೆ ಕನ್ನಡ ಮಾಧ್ಯಮಕ್ಕೆ 76 ಹಾಗೂ ಆಂಗ್ಲ ಮಾಧ್ಯಮಕ್ಕೆ 61 ಮಕ್ಕಳು ದಾಖಲಾತಿ ಪಡೆದಿದ್ದಾರೆ. 9ನೇ ತರಗತಿಯಲ್ಲಿ 206 ಹಾಗೂ 10ನೇ ತರಗತಿಯಲ್ಲಿ 190 ಮಕ್ಕಳು ಕಲಿಯುತ್ತಿದ್ದಾರೆ. ಬೆಂಗಳೂರು, ರಾಮನಗರ ಗಳಿಂದಲೂ ದಾಖಲಾತಿಗೆ ಬೇಡಿಕೆ ಇದ್ದು, ಮದ್ದೂರು ತಾಲೂಕು, ಹಲಗೂರಿನಿಂದ ಖಾಸಗಿ ಶಾಲೆಯಿಂದ ಮಕ್ಕಳನ್ನು ಕರೆತಂದು ಮಾರಗೌಡನಹಳ್ಳಿ ಶಾಲೆಗೆ ಸೇರಿಸುವ ಯತ್ನ ನಡೆಯುತ್ತಿದೆ.
ಚಟುವಟಿಕೆಯಲ್ಲಿ ಮುಂದು: 1997ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 24 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಪ್ರಸ್ತುತ 533 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಈ ಶಾಲೆ ಶೇ.90ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಉದಾಹರಣೆಗಳಿಲ್ಲ. 2016&17ನೇ ಸಾಲಿನಿಂದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ.
ಈ ಶಾಲೆಗೆ ಶಿಕ್ಷಕರೇ ದೊಡ್ಡ ಶಕ್ತಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ಮೂಲಕ ಪರೀಕ್ಷೆಗೆ ಸಜ್ಜುಗೊಳಿಸುತ್ತಾರೆ. ಕೇಂದ್ರ ಸರ್ಕಾರ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಕಮಾಲ್ ಮಾಡುತ್ತಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅಭಿಷೇಕ್ಗೌಡ ಎಂಬುವರು ಯುಪಿಎಸ್ಸಿ ಪರೀಕ್ಷೆಯಲ್ಲಿ 275ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ. ಶಾಲೆಯ ಮೊದಲ ಬ್ಯಾಚ್ನಲ್ಲಿದ್ದ ಲಕ್ಷಿ$್ಮ ಅಶ್ವಿನ್ಗೌಡ ಐಆರ್ಎಸ್ ಹುದ್ದೆ ಅಲಂಕರಿಸಿದ್ದರು.
ಈ ವರ್ಷ 8ನೇ ತರಗತಿಗೆ 137 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಇನ್ನು ಕೆಲವರಿಗಷ್ಟೇ ಅವಕಾಶ ಕೊಡ ಬಹುದು. ಹೊರ ಜಿಲ್ಲೆಯಿಂದಲೂ ದಾಖಲಿಸಲು ಬರುತ್ತಿದ್ದಾರೆ. | ಜಿ.ಎಸ್.ಕಾಳರಾಜೇಗೌಡ ಮುಖ್ಯ ಶಿಕರು
ಸ್ಥಳಾವಕಾಶದ ಕೊರತೆ ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಶಾಲೆಗೆ, ಇನ್ನಷ್ಟು ಜಾಗದ ಅವಶ್ಯಕತೆ ಇದೆ. ಸರ್ಕಾರ ಅನುದಾನ ನೀಡಲು ಒಪ್ಪಿದರೂ ಕಟ್ಟಡ ನಿರ್ಮಾಣಕ್ಕೆ ಜಾಗವಿಲ್ಲ. ಒಂದು ವೇಳೆ ಈ ಸಮಸ್ಯೆ ಬಗೆಹರಿದರೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನು ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಸದ್ಯ 7 ಶಿಕ್ಷಕರಿದ್ದು, 9 ಜನ ಶಿಕ್ಷಕರ ಕೊರತೆಯಿದೆ.