ಮಕ್ಕಳ ಗ್ರಾಮಸಭೆ ಮಂಡ್ಯ ಫಸ್ಟ್: ರಾಜ್ಯದಲ್ಲೇ ಶೇ.90ರಷ್ಟು ಪ್ರಗತಿ ಸಾಧನೆ

Mandya first in organizing childrens gram sabha Mandya
Published on

ಮಂಡ್ಯ: ಈ ವರ್ಷ ಮಕ್ಕಳ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮಸಭೆ ಆಯೋಜನೆಯಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ಉತ್ತಮ ಸ್ಥಾನ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲಿಯೂ ಮಕ್ಕಳ ಗ್ರಾಮಸಭೆಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಸಂಯೋಜಿಸಿದ್ದ ಬೇಸಿಗೆ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು.

ಮಕ್ಕಳ ಗ್ರಾಮಸಭೆ ಹಾಗೂ ಮಹಿಳಾ ಗ್ರಾಮಸಭೆ ವಿಶೇಷ ಸ್ಥಾನ ಪಡೆದುಕೊಂಡಿವೆ. ಈ ಸಭೆಗಳ ಮೂಲಕ ಮಕ್ಕಳ ಸಮಸ್ಯೆ ಬಗೆಹರಿಸಲು ಹಾಗೂ ಮಹಿಳೆಯರ ಸಬಲೀಕರಣಕ್ಕೆ ಮುಖ್ಯವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸಭೆ ಆಯೋಜನೆ ಬಗ್ಗೆ ವಿಶೇಷ ಆಸ್ಥೆ ವಹಿಸಲಾಗುತ್ತದೆ. ಅದರಂತೆ ಈ ಬಾರಿ ಜಿಪಂ ಯಶಸ್ವಿಯಾಗಿದೆ. ಮಕ್ಕಳ ಗ್ರಾಮಸಭೆ ಆಯೋಜನೆಯಲ್ಲಿ ಪ್ರಥಮ ಹಾಗೂ ಮಹಿಳಾ ಗ್ರಾಮಸಭೆಯಲ್ಲಿ ಏಳನೇ ಸ್ಥಾನವನ್ನು ಮಂಡ್ಯ ಅಲಂಕರಿಸಿದೆ.

ಶೇ.90ರಷ್ಟು ಸಾಧನೆ: ಮಕ್ಕಳ ಗ್ರಾಮಸಭೆ ಆಯೋಜನೆಯಲ್ಲಿ ಮಂಡ್ಯ ರಾಜ್ಯದ ಗಮನಸೆಳೆದಿದೆ. ರಾಜ್ಯಸರ್ಕಾರ ಹಾಗೂ ಜಿಪಂ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಸಭೆಯನ್ನು ಸಂಯೋಜಿಸಲಾಗಿದೆ. ಇನ್ನು ಈ ವರ್ಷದ ವಿಭಿನ್ನ ಚಟುವಟಿಕೆಯಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರ ಹೊಸತನದ ಜತೆಗೆ ವಿಶೇಷತೆಯಿಂದ ಗಮನಸೆಳೆಯಿತು. ನಗರ ಪ್ರದೇಶದ ಮಕ್ಕಳಿಗೆ ಬೇಸಿಗೆ ಶಿಬಿರದ ಪ್ರಯೋಜನೆ ಸಿಗುತ್ತದೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಇಂತಹ ಶಿಬಿರ ಗಗನ ಕುಸುಮ ಎನಿಸುತ್ತದೆ. ಕಾರಣ ಆಯೋಜಕರ ಕೊರತೆ. ಈ ನಿಟ್ಟಿನಲ್ಲಿ ಹಳ್ಳಿಯಲ್ಲಿಯೂ ಶಿಬಿರ ಆಯೋಜಿಸುವ ಪ್ರಯತ್ನಕ್ಕೆ ಸ್ಪಂದನೆ ಸಿಕ್ಕಿತು.

ಬೇಸಿಗೆ ಶಿಬಿರದ ಅಂಗವಾಗಿ ಜಿಲ್ಲೆಯ 216 ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಿ ಶೇ.90ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆಯಿತು. ಶಿಬಿರದ ಅವಧಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿತ್ತು. ಜಿಲ್ಲಾದ್ಯಂತ 17,500 ಮಕ್ಕಳು ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಮೂಲಕ ಜಿಲ್ಲೆಯು ಮತ್ತೊಂದು ಗಮನಾರ್ಹ ಸಾಧನೆ ಮಾಡಿತು.

ಇನ್ನೊಂದೆಡೆ ಮಹಿಳಾ ಸ್ನೇಹಿ ಗ್ರಾಮಸಭೆಯೂ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 233 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 212 ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಗ್ರಾಮ ಸಭೆಯನ್ನು ಆಯೋಜಿಸಿ ಶೇ.92ರಷ್ಟು ಪ್ರಗತಿ ಸಾಧಿಸಲಾಗಿದೆ. ಮಹಿಳಾ ಸಶಕ್ತಿಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಮಾ.8 ರಿಂದ ಜೂ.30ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಚುನಾಯಿತ ಪ್ರತಿನಿಧಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ನಿರೀಕ್ಷೆಯಂತೆ ಸಾಧನೆ ಮಾಡಲು ಸಾಧ್ಯವಾಗಿದೆ.

ಇದಲ್ಲದೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಜಿಲ್ಲೆಯ ಎಲ್ಲ 233 ಗ್ರಾಮ ಪಂಚಾಯಿತಿಗಳಲ್ಲಿ ವಿನೂತನವಾಗಿ ಆಚರಣೆ ಮಾಡಲಾಯಿತು. ಈ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಕಾರ್ಯ ಚಟುವಟಕೆಗಳಲ್ಲಿ ಸಮುದಾಯದ ಸಹಭಾಗಿತ್ವ, ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶ್ರಮಿಸಲಾಗಿದೆ.

ದಾಖಲೆ ಬರೆದ ಅಣ್ಣೂರು ಗ್ರಾಪಂ

ಮದ್ದೂರು ತಾಲೂಕು ಅಣ್ಣೂರು ಗ್ರಾಮ ಪಂಚಾಯಿತಿಯು ಮಹಿಳಾ ಸಶಕ್ತಿಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ವಿಶೇಷ ಆಚರಿಸುವ ಮೂಲಕ ದಾಖಲೆ ಬರೆದಿದೆ. ಅಂದು ಏಕಕಾಲದಲ್ಲಿ ಗರಿಷ್ಟ ಸಂಖ್ಯೆಯ ರಂಗೋಲಿಗಳನ್ನು ಬಿಡಿಸುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಚಟುವಟಿಕೆಯಡಿ 1544 ಕುಟುಂಬಗಳು 1418 ರಂಗೋಲಿಯನ್ನು ನೈಸರ್ಗಿಕ ಬಣ್ಣ ಬಳಸಿ ಬಿಡಿಸಿದ್ದವು. ಈ ಚಟುವಟಿಕೆಯು ಪ್ರಸ್ತುತ ಇಂಡಿಯಾ ಬುಕ್ ಆ್ ರೆಕಾರ್ಡ್‌ನಲ್ಲಿ ಸೇರ್ಪಡೆ ಆಗಿದೆ. ಈ ಹಿನ್ನಲೆಯಲ್ಲಿ ಅಣ್ಣೂರು ಗ್ರಾಮ ಪಂಚಾಯಿತಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಕಾರ್ಯವನ್ನು ಜಿ.ಪಂ ಸಿಇಒ ಪ್ರಶಂಸಿದ್ದಾರೆ.

ಅಣ್ಣೂರು ಗ್ರಾಮ ಪಂಚಾಯಿತಿ ಸಾಧನೆಯು ಉತ್ತಮ ಅಭ್ಯಾಸವಾಗಿದೆ. ಮಾತ್ರವಲ್ಲದೆ ಗ್ರಾಪಂ ಆಡಳಿತ ಮತ್ತು ಕಾರ್ಯಚಟುವಟಿಕೆಗಳಲ್ಲಿ ಸಮುದಾಯದ ಸಹಬಾಗಿತ್ವಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಇತರ ಗ್ರಾಪಂಗೆ ಪ್ರೇರಣೆಯಾಗಿದೆ. ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಮಹಿಳಾ ಸ್ನೇಹಿ ಹಾಗೂ ಸಾರ್ವಜನಿಕ ಸ್ನೇಹಿ ಗ್ರಾಮ ಪಂಚಾಯತ್‌ಗಳಾಗುವತ್ತ ಮೊದಲ ಹೆಜ್ಜೆ ಇಟ್ಟಿವೆ. ಕೆ.ಆರ್.ನಂದಿನಿ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net