

ಮಂಡ್ಯ: ಮಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೊಳಗಾದ ಮಗು ಸಾವನ್ನಪ್ಪಿರುವ ಪ್ರಕರಣವನ್ನು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಎಮ್ಮೆ ಕರುವಿನೊಂದಿಗೆ ಪ್ರತಿಭಟನೆ ನಡೆಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯ ಮಿಮ್ಸ್ ಮುಖ್ಯ ದ್ವಾರದಿಂದ ವೈದ್ಯಕೀಯ ಅಧೀಕ್ಷಕರ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಿಮ್ಸ್ ವೈದ್ಯಕೀಯ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿ ಪುತ್ರಿ ಸಾನ್ವಿ ಕಾಲಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದ ವೈದ್ಯರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮಗುವಿನ ಸಾವಿನ ಸತ್ಯಾಸತ್ಯತೆಯನ್ನು ತಿಳಿಯಲು ಜಿಲ್ಲಾಡಳಿತ ತಂಡ ರಚನೆ ಮಾಡಿದೆ. ಆದರೆ ಪಾಲಕರಿಗೆ ಬೆದರಿಕೆಯೊಡ್ಡಿ ಮಗುವಿಗೆ ಮೊದಲೇ ಕಾಯಿಲೆ ಇತ್ತು. ಇದರಿಂದ ಸಾವು ಸಂಭವಿಸಿದೆ ಎಂದು ಬರೆದು ಸಹಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಮಗುವಿನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕು. ಮಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಬಯೋಮೆಟ್ರಿಕ್ ಅಳವಡಿಸಬೇಕು. ಆಸ್ಪತ್ರೆ ವೈದ್ಯರಿಗೆ ಬಾಡಿ ಕ್ಯಾಮೆರಾ ಅಳವಡಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಬಿ.ಶಂಕರ್‌ಬಾಬು, ಕೆ.ಎಚ್.ಜಗದೀಶ್, ದೇವಮ್ಮ, ಆರ್.ಜಗದೀಶ್, ಸತ್ಯನಾರಾಯಣಮೂರ್ತಿ ಇತರರಿದ್ದರು.