ನಗರದಲ್ಲಿ ಅದ್ಧೂರಿ ದಸರಾ ಆಚರಣೆ: ಮಂಡ್ಯ ಯೂತ್ ಗ್ರೂಪ್‌ನಿಂದ ಆಯೋಜನೆ

Mandya Dasara celebration Mandya
Published on

ಮಂಡ್ಯ: ಮಂಡ್ಯ ಯೂತ್ ಗ್ರೂಪ್‌ನಿಂದ ನಗರದಲ್ಲಿ ವಿಜೃಂಭಣೆಯಿಂದ ಹನ್ನೊಂದನೇ ವರ್ಷದ ದಸರಾ ಹಬ್ಬವನ್ನು ಆಚರಣೆ ಮಾಡಲಾಯಿತು.
ವಿಜಯದಶಮಿ ಅಂಗವಾಗಿ ಯೂತ್ ಗ್ರೂಪ್‌ನಿಂದ ದಸರಾ ಸಾಂಸ್ಕೃತಿಕ ಉತ್ಸವ ಪರಂಪರೆಗೆ ನಾಂದಿಯಾಡಲಾಗಿತ್ತು. ಪ್ರತಿ ಬಾರಿಯಂತೆ ಈ ವರ್ಷವೂ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಬೆಳ್ಳಿರಥದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಮೆರವಣಿಗೆ ಜನರನ್ನು ಆಕರ್ಷಿಸಿತು. ಜಾನಪದ ಕಲಾತಂಡಗಳು ಮೆರುಗು ನೀಡಿದವು.
ನಗರದ ಕಾಳಿಕಾಂಬ ದೇವಾಲಯದ ಗಜೇಂದ್ರಮೋಕ್ಷ ಕೊಳದ ಬಳಿ ಇರುವ ಬನ್ನಿಮರಕ್ಕೆ ಮಧ್ಯಾಹ್ನ 3.15ರಿಂದ 3.50ರೊಳಗೆ ಸಲ್ಲುವ ಶ್ರವಣನಕ್ಷತ್ರ ಕುಂಭ ಲಗ್ನದಲ್ಲಿ ಶಾಸಕ ರವಿಕುಮಾರ್ ಗಣಿಗ ಮತ್ತು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಎಲ್ಲೆಡೆ ಸುಭಿಕ್ಷೆ ನೆಲೆಸಲಿ. ರೈತರ ಬೆಳೆ ಕೈಸೇರಿ ಅವರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ನಂತರ ಬೆಳ್ಳಿರಥದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಶ್ರೀ ಚಾಮುಂಡೇಶ್ವರಿ ದೇವಿಗೆ ಶಾಸಕ ರವಿಕುಮಾರ್ ಗಣಿಗ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಾಳಿಕಾಂಬ ದೇವಾಲಯದ ಮುಂಭಾಗದಿಂದ ಮಂಡ್ಯ ದಸರಾ ಮೆರವಣೆಗೆ ಆರಂಭಗೊಂಡಿತು. 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಜತೆಗೂಡಿದವು. ಒಂದೊಂದು ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರದರ್ಶನ ನೀಡುತ್ತಾ ಮುಂದೆ ಮುಂದೆ ಸಾಗಿದವು. ಕಲಾವಿದರ ಪ್ರತಿಭಾ ಪ್ರದರ್ಶನ ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿತು.
ಈ ಬಾರಿ ಕೇರಳ ಚಂಡೆ, ಭದ್ರಕಾಳಿ ವೀರಗಾಸೆ, ನಾಗರಹೊಳೆ ಜೇನುಕುರುಬರ ಕುಣಿತ, ಕೋಳಿ ಗೊಂಬೆ ತಂಡದವರನ್ನು ವಿಶೇಷವಾಗಿ ಕರೆತರಲಾಗಿತ್ತು. ಹೊಸದಾಗಿ ಸೇರ್ಪಡೆಗೊಂಡಿದ್ದ ಕಲಾತಂಡಗಳು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ಬೆಂಕಿ ಭರಾಟೆ, ದೊಣ್ಣೆವರಸೆ ಪ್ರದರ್ಶನ ಜನರನ್ನು ರೋಮಾಂಚನಗೊಳಿಸಿತು. ಡೊಳ್ಳಿನ ಶಬ್ಧ ಎಲ್ಲೆಡೆ ಮಾರ್ದನಿಸಿತು. ಈ ಶಬ್ಧಕ್ಕೆ ತಕ್ಕಂತೆ ಕಲಾವಿದರ ಕುಣಿತವೂ ಆಕರ್ಷಣೀಯವಾಗಿತ್ತು. ತಮಟೆ ಸದ್ದು ಕೂಡ ಡೊಳ್ಳಿಗೆ ಸರಿಸಮನಾಗಿ ಮೊಳಗುತ್ತಿತ್ತು.
ಪುಟ್ಟ ಕಾಲು ಉದ್ದ ದೇಹದೊಂದಿಗೆ ಮೈಮೇಲೆ ಕಪ್ಪು ಚುಕ್ಕೆಗನ್ನಿರಿಸಿಕೊಂಡ ಶ್ವೇತ ವರ್ಣದಲ್ಲಿ ಪಾಲ್ಗೊಂಡಿದ್ದ ಬನ್ನೂರು ಕುರಿಗಳು ಎಲ್ಲರ ಗಮನಸೆಳೆದವು. ಹುಲಿವೇಷ, ಗೊರವರ ಕುಣಿತ, ವೀರಮಕ್ಕಳ ಕುಣಿತ ಪ್ರದರ್ಶನ ಶಹಬ್ಬಾಸ್‌ಗಿರಿ ಪಡೆದುಕೊಂಡವು. ಇನ್ನುಳಿದಂತೆ ನಾದಸ್ವರ, ಪೂಜಾ ಕುಣಿತ, ಚಿಲಿಪಿಲಿಗೊಂಬೆ, ಸೋಮನ ಕುಣಿತ, ಶ್ರೀರಂಗಪಟ್ಟಣ ಡ್ರಮ್ಸ್, ತಮಟೆ, ನಗಾರಿ, ಕಂಸಾಳೆ ಅತ್ಯುತ್ತಮ ಪ್ರದರ್ಶನ ನೀಡಿ ರಂಜಿಸಿದವು.

ಮಂಡ್ಯ ದಸರಾ ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ವೀಕ್ಷಿಸಿದರು. ವಿಶ್ವೇಶ್ವರಯ್ಯ ರಸ್ತೆಯಿಂದ ಹೊಸಹಳ್ಳಿ ವೃತ್ತದವರೆಗೆ ಹಾಗೂ ಹೊಸಹಳ್ಳಿ ವೃತ್ತದಿಂದ ಬನ್ನೂರು ರಸ್ತೆವರೆಗೂ ಕಟ್ಟಡಗಳ ಮೇಲೆ ನಿಂತು ದಸರಾ ಮೆರವಣಿಗೆಯನ್ನು ನೋಡಿ ಸಂಭ್ರಮಿಸಿದರು. ಮೆರವಣಿಗೆಯು ಕಾಳಿಕಾಂಬ ದೇವಾಲಯದ ಆವರಣದಿಂದ ಹೊರಟು ಎಸ್.ಡಿ.ಜಯರಾಂ ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಅಲ್ಲಿಂದ ಮಹಾವೀರ ವೃತ್ತ ತಲುಪಲಿದೆ. ನಂತರ ವಿ.ವಿ ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತಕ್ಕೆ ಆಗಮಿಸಲಿದೆ. ಬಳಿಕ ನೂರಡಿ ರಸ್ತೆ ಮಾರ್ಗವಾಗಿ ತೆರಳಿ ಬನ್ನೂರು ರಸ್ತೆ ಮೂಲಕ ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ಮೆರವಣಿಗೆ ಅಂತ್ಯಗೊಂಡಿತು.
ಮಂಡ್ಯ ಯೂತ್ ಗ್ರೂಪ್ ಪದಾಧಿಕಾರಿಗಳು ಶ್ವೇತ ವಸದಲ್ಲಿ ಕಾಣಿಸಿಕೊಂಡು ಗಮನಸೆಳೆದರು. ಮಾತ್ರವಲ್ಲದೆ ಮೆರವಣಿಗೆಯುದ್ದಕ್ಕೂ ಜತೆಯಾಗಿ ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮುನ್ನಡೆಸಿದರು. ಇನ್ನು ಮಂಡ್ಯ ದಸರಾ ಮೆರವಣಿಗೆ ಆರಂಭದಿಂದ ಅಂತ್ಯದವರೆಗೂ ಪೊಲೀಸರು ಉತ್ತಮ ಸಹಕಾರ ನೀಡಿದರು. ಅಗತ್ಯ ಭದ್ರತೆಯನ್ನು ಒದಗಿಸುವುದರೊಂದಿಗೆ ಎಲ್ಲಿಯೂ ಮೆರವಣಿಗೆಗೆ ಅಡ್ಡಿ-ಅಡಚಣೆಗಳು ಎದುರಾಗದಂತೆ ನೋಡಿಕೊಂಡರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ ಸಹಕಾರಕ್ಕೆ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net