ಜಿಲ್ಲೆಯಲ್ಲಿ ಮತ್ತೆ 33 ಜನರಿಗೆ ಕರೊನಾ

21MND-1
Published on

ಮಂಡ್ಯ: ಮುಂಬೈನಿಂದ ಬಂದವರು, ರಾಣೆಬೆನ್ನೂರಿನಿಂದ ಬಂದ ಒಬ್ಬ, ಹಾಲಿ ಸೋಂಕಿತರ ಸಂಪರ್ಕದಲ್ಲಿದ್ದ ಇಬ್ಬರು ಸೇರಿ ಗುರುವಾರ 33 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ.
ಮೇ 13, 14, 15 ಮತ್ತು 16ರಂದು ಮುಂಬೈನಿಂದ ಕೆ.ಆರ್.ಪೇಟೆ, ನಾಗಮಂಗಲಕ್ಕೆ ಬಂದವರನ್ನು ಚೆಕ್‌ಪೋಸ್ಟ್‌ನಲ್ಲಿ ಕ್ವಾರಂಟೈನ್ ಮಾಡಿ, ಅಲ್ಲಿಂದ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜತೆಗೆ ಜಿಲ್ಲೆಯಲ್ಲಿದ್ದು ಅವರ ಸಂಪರ್ಕದಲ್ಲಿದ್ದವರು ಸೇರಿ 33 ಜನರ ವರದಿ ಪಾಸಿಟಿವ್ ಬಂದಿದೆ.
ಎಲ್ಲರೂ ಮುಂಬೈನ ಸಂತಾಕ್ರೂಸ್, ಚಕಾಲ ಈಸ್ಟ್, ಸೈನ್‌ಕೋಳಿವಾಡ, ಮುಲಾಲ್ ಕೊರ್ಲ, ವರ್ಲಿ ಮುಂಬೈ ಮತ್ತಿತರ ಕಡೆ ವಾಸವಿದ್ದು, ಹೋಟೆಲ್‌ನಲ್ಲಿ ಕೆಲಸ, ಆಟೋ ಚಾಲನೆ, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ. ಸೋಂಕಿತರನ್ನು ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಸೋಂಕಿತರಿವರು: ಪಿ.1468 ಮಹಿಳೆ-50, ಪಿ.1469 ಪುರುಷ-23, ಪಿ.1470 ಪುರುಷ-53, ಪಿ.1472 ಪುರುಷ-37, ಪಿ.1473 ಮಹಿಳೆ-36, ಪಿ.1474 ಬಾಲಕ-17, ಪಿ.1475 ಬಾಲಕಿ-7, ಪಿ.1554 ಮಹಿಳೆ-35, ಪಿ.1555 ಪುರುಷ-42, ಪಿ.1556 ಮಹಿಳೆ 35, ಪಿ.1557 ಬಾಲಕ-15, ಪಿ.1584 ಪುರುಷ-47, ಪಿ.1585 ಮಹಿಳೆ-28, ಪಿ.1586 ಪುರುಷ-32.
ಪಿ.1589 ಪುರುಷ-42, ಪಿ.1590 ಮಹಿಳೆ 32, ಪಿ.1591 ಬಾಲಕ-13, ಪಿ.1592 ಬಾಲಕ 11, ಪಿ.1593 ಮಹಿಳೆ-21, ಪಿ.1594 ಮಹಿಳೆ-56, ಪಿ.1595 ಪುರುಷ-52, ಪಿ.1596 ಬಾಲಕ-16, ಪಿ.1597 ಪುರುಷ-47, ಪಿ.1598 ಪುರುಷ-35, ಪಿ.1599 ಮಹಿಳೆ-32, ಪಿ.1600 ಬಾಲಕ 12, ಪಿ.1601 ಬಾಲಕಿ-10, ಪಿ.1602 ಪುರುಷ-29, ಪಿ.1603 ಪುರುಷ-41 ಸೋಂಕಿತರಾಗಿದ್ದಾರೆ.
ಪಿ.869ನಿಂದ ಮತ್ತೆ ಮೂವರಿಗೆ ಸೋಂಕು: ಮಾ.24ರಂದು ಮುಂಬೈನಿಂದ ಬಂದು ಮೈಸೂರಿನ ವಿಜಯನಗರದಲ್ಲಿ ಕ್ವಾರಂಟೈನ್‌ನಲ್ಲಿದ್ದು, ಮೇ 12ರಂದು ಕೆ.ಆರ್.ಪೇಟೆಗೆ ಬಂದ ಸೋಂಕಿತ ಪಿ.869 ಪ್ರಥಮ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಇವರಿಂದ ಸೋಂಕು ಹರಡಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ಪಿ.1467 ಪುರುಷ (27), ಪಿ.1486 ಪುರುಷ (22), ಪಿ.1487 ಪುರುಷ (27), ಪಿ.1597 ಪುರುಷ (42) ಸೋಂಕಿತರಾಗಿದ್ದಾರೆ. ಇದಕ್ಕೂ ಮುನ್ನ ಪಿ.869ರ ಪ್ರಥಮ ಸಂಪರ್ಕದಲ್ಲಿದ್ದ ಪಿ.1112 ಸೋಂಕಿತನ ಪತ್ನಿ (65), ಪಿ.1113 ಮಹಿಳೆ (60), ಪಿ.1114 ಪುರುಷ (27), ಪಿ.1125 ಮಹಿಳೆ (53)ಗೆ ಮೇ 17ರಂದು ಸೋಂಕು ದೃಢಪಟ್ಟಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಣೆಬೆನ್ನೂರಿನಿಂದ ಬಂದ ಕಾರ್ಮಿಕ: ಪಾಂಡವಪುರ ತಾಲೂಕಿನ ಚಿನಕುರಳಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿದ್ದ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದ್ದು, ಪಾಂಡವಪುರದಲ್ಲಿ ಮತ್ತೊಂದು ಖಾತೆ ತೆರೆದಂತಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗೋವಿಂದ ಬಡಾವಣೆಯಿಂದ ಬಂದಿದ್ದ ಕಾರ್ಮಿಕನನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಪಾಸಿಟಿವ್ ಬಂದಿದೆ. ಇವರ ಪ್ರಥಮ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡಿರುವ ಆತಂಕ ನಿರ್ಮಾಣವಾಗಿದೆ. ಎಲ್ಲರನ್ನೂ ಈಗ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಹರಡುತ್ತಿಲ್ಲ: ಸದ್ಯ ಲಾಕ್‌ಡೌನ್ ಸಡಿಲಿಕೆಯಿಂದ ಸರ್ಕಾರದ ನಿರ್ದೇಶನದಂತೆ ಮುಂಬೈನಿಂದ ಬಂದವರಲ್ಲಿ ಸೋಂಕು ದೃಢಪಡುತ್ತಿದೆ. ಅವರಿಂದ ಸ್ಥಳೀಯರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ತಬ್ಲಿಘಿ ಸಂಪರ್ಕ ಆತಂಕ ಮೂಡಿಸಿತ್ತು. ಸದ್ಯ ಅಲ್ಲಿ ನಿಯಂತ್ರಣಕ್ಕೆ ಬಂದಿತ್ತು. ದ್ವಿತೀಯ ಸಂಪರ್ಕದಲ್ಲಿದ್ದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಜತೆಗೆ ಮುಂಬೈನಿಂದ ಬಂದಿದ್ದ ಪಿ.869 ಪ್ರಥಮ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಪ್ರಸ್ತುತ ಮುಂಬೈನಿಂದ ಬಂದವರಿಂದ ಬೇರೆಯವರಿಗೆ ಸೋಂಕು ಹರಡುತ್ತಿಲ್ಲ. ಆದ್ದರಿಂದ ಜಿಲ್ಲೆಯ ಜನತೆ ಆತಂಕಪಡುವ ಅಗತ್ಯವಿಲ್ಲ.
ಜನತೆ ಮಾಸ್ಕ್ ಬಳಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡುವುದರಿಂದ ಸೋಂಕು ಹರಡದಂತೆ ತಡೆಯಬಹುದು. ಸರ್ಕಾರದ ನಿರ್ದೇಶನಗಳನ್ನು ತಪ್ಪದೆ ಪಾಲಿಸುವ ಮೂಲಕ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಬರಬೇಕಿದೆ 1630 ಜನರ ಫಲಿತಾಂಶ: ಮುಂಬೈನಿಂದ ಬರುತ್ತಿರುವ ಜನರನ್ನು ಕ್ವಾರಂಟೈನ್ ಮಾಡುತ್ತಿರುವುದರ ಜತೆಗೆ ಇತರರ ಸಂಪರ್ಕದಲ್ಲಿದ್ದವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿದ್ದು ಇನ್ನೂ 1630 ಜನರ ಫಲಿತಾಂಶ ಬರಬೇಕಿದೆ.
ಜಿಲ್ಲೆಯಲ್ಲಿ ಈ ತನಕ 9063 ಜನರ ರಕ್ತ, ಗಂಟಲು ದ್ರವ ಸಂಗ್ರಹಿಸಿದ್ದು, ಈ ಪೈಕಿ 7233 ಜನರ ವರದಿ ನೆಗೆಟಿವ್ ಬಂದಿದೆ. ಸದ್ಯ 25 ಜನ ಗುಣಮುಖರಾಗಿದ್ದು, ಐಸೋಲೇಷನ್‌ನಲ್ಲಿ 176 ಜನರಿದ್ದು, ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿ 9, ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿ 1419, ಹೋಂ ಕ್ವಾರಂಟೈನ್‌ನಲ್ಲಿ 3665 ಜನರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net