ಜನಪ್ರತಿನಿಧಿಗಳನ್ನು ಕತ್ತೆಲೆಯಲ್ಲಿಟ್ಟಿರುವ ಡಿಸಿ

25_05_Mdy_Csp Press Meet
Published on

ಮಂಡ್ಯ: ಕರೊನಾ ಪ್ರಕರಣಗಳ ಕುರಿತು ಜಿಲ್ಲಾಡಳಿತ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಶಾಸಕ ಸಿ.ಎಸ್.ಪುಟ್ಟರಾಜು, ಮೇ 28ರೊಳಗೆ ಸಭೆ ಆಯೋಜಿಸಿ ಖಚಿತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಧಿಕಾರಿ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಕ್ವಾರಂಟೈನ್ ಮಾಡಿದವರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಕೋವಿಡ್-19ಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಅಸ್ಪಷ್ಟವಾಗಿದ್ದು, ಜಿಲ್ಲಾಡಳಿತ ವಾಸ್ತವ ಸಂಗತಿಯನ್ನು ಮುಂದಿಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಜಿಲ್ಲಾಧಿಕಾರಿ ಯಾವುದೇ ಮಾಹಿತಿ ನೀಡದೆ, ಸಭೆಯನ್ನೂ ನಡೆಸದೆ ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ತಾಲೂಕು ಮಟ್ಟದಲ್ಲಿ ಸಚಿವರು ನಡೆಸುತ್ತಿರುವ ಸಭೆಗಳಿಗೆ ಶಾಸಕರನ್ನು ಆಹ್ವಾನಿಸುತ್ತಿಲ್ಲ. ಜೆಡಿಎಸ್ ಶಾಸಕರು ಜಿಲ್ಲಾಡಳಿತದ ನ್ಯೂನತೆಯನ್ನು ಗಮನಕ್ಕೆ ತಂದರೆ, ಅದನ್ನು ಸಮಾಧಾನದಿಂದ ಪರಿಶೀಲಿಸದೆ ಶಾಸಕರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ ಎಂದು ಆರೋಪಿಸಿದರು.


ಮೈಶುಗರ್ಸ್‌ ಕಾರ್ಖಾನೆ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು ಎಂಬುದನ್ನು ಸಂಸದೆ ಸುಮಲತಾ ಅಂಬರೀಷ್ ಬಹಿರಂಗಪಡಿಸಬೇಕು. ರೈತರ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಜೆಡಿಎಸ್ ಶಾಸಕರ ಸಭೆ ಕರೆದು ಚರ್ಚಿಸಬಹುದಾಗಿತ್ತು. ಕಾರ್ಖಾನೆಯ ಪ್ರಗತಿಗೆ ಪೂರಕವಾಗಿ ಸಲಹೆ-ಸೂಚನೆ ಪಡೆಯಬಹುದಿತ್ತು. ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು ಎಂದರು.


ಕಾರ್ಖಾನೆ ಸಕಾಲದಲ್ಲಿ ಆರಂಭಗೊಳ್ಳಬೇಕು. ಕಬ್ಬನ್ನು ಸಮರ್ಥವಾಗಿ ಅರೆದು ನಿಗದಿತ ವೇಳೆಗೆ ರೈತರಿಗೆ ಹಣ ಪಾವತಿಸಬೇಕೆಂಬುದು ನಮ್ಮ ಆಗ್ರಹ. ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕು ಎನ್ನುವುದು ಷೇರುದಾರರು ಹಾಗೂ ಆಡಳಿತ ಮಂಡಳಿಯವರ ತೀರ್ಮಾನ ಎಂದು ತಿಳಿಸಿದರು.


ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

ವರದಿಯಲ್ಲಿ ಜಿಲ್ಲಾಡಳಿತ ಯಡವಟ್ಟು: ಜಿಲ್ಲಾಡಳಿತದ ಯಡವಟ್ಟಿನಿಂದಾಗಿ ಇಬ್ಬರು ಬಾಲಕಿಯರ ಕರೊನಾ ಪರೀಕ್ಷಾ ವರದಿಗಳು ಅದಲು-ಬದಲಾಗಿವೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆರೋಪಿಸಿದರು.


ಚಿನಕುರಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸುರೇಶ್ ಎಂಬುವರ ಕುಟುಂಬ ಮೇ 17ರಂದು ರಾಣೆಬೆನ್ನೂರಿನಿಂದ ಹೊರಟು ಮೇ 18ರಂದು ಚಿನಕುರಳಿಗೆ ಬಂದಿತ್ತು. ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದೇ ದಿನ ನಾರಾಯಣಪುರ ಗ್ರಾಮದ ಚಂದ್ರಶೇಖರಗೌಡ ಕುಟುಂಬ ಮುಂಬೈನಿಂದ ಪಾಂಡವಪುರಕ್ಕೆ ಆಗಮಿಸಿದ್ದರಿಂದ ಅವರನ್ನೂ ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.


ಮೇ 22ರ ವರದಿಯಲ್ಲಿ ಸುರೇಶ್ ಅವರ ಪುತ್ರಿಗೆ ನೆಗೆಟಿವ್ ಹಾಗೂ ಚಂದ್ರಶೇಖರಗೌಡರ ಪುತ್ರಿಗೆ ಪಾಸಿಟಿವ್ ಬಂದಿತ್ತು. ಆದರೆ, ಜಿಲ್ಲಾಡಳಿತ ವರದಿಯನ್ನು ಸರಿಯಾಗಿ ಪರಿಶೀಲಿಸದೆ ನೆಗೆಟಿವ್ ಬಂದಿದ್ದ 11 ವರ್ಷದ ಬಾಲಕಿಯನ್ನು ಐಸೋಲೇಷನ್ ವಾರ್ಡ್‌ಗೂ ಹಾಗೂ ಪಾಸಿಟಿವ್ ಬಂದಿದ್ದ 7 ವರ್ಷದ ಬಾಲಕಿಯನ್ನು ಕ್ವಾರಂಟೈನ್‌ಗೂ ಕಳುಹಿಸಿತ್ತು ಎಂದರು.


ಜಿಲ್ಲಾಡಳಿತದ ಲೋಪದಿಂದ ಬಾಲಕಿ ತೊಂದರೆ ಅನುಭವಿಸುವಂತಾಯಿತು ಎಂದ ಅವರು, ಪ್ರಕರಣವನ್ನು ಪರಿಶೀಲಿಸಿ ಚಿನಕುರಳಿಯನ್ನು ಕಂಟೇನ್ಮೆಂಟ್ ವಲಯದಿಂದ ಮುಕ್ತಿಗೊಳಿಸುವಂತೆ ಒತ್ತಾಯಿಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net