

ಮಂಡ್ಯ: ಮಾರಕ ಕರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಸರ್ಕಾರ, ಜಿಲ್ಲಾಡಳಿತ 2 ತಿಂಗಳಿಂದ ನಿರಂತರವಾಗಿ ಮಾಡಿದ ಮನವಿಗೆ ಕೊನೆಗೂ ಜನರು ಸ್ಪಂದಿಸಿದ್ದಾರೆ.
ಎಷ್ಟೇ ಹೇಳಿದರೂ, ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ತಡೆದರೂ ಒಂದಿಲ್ಲೊಂದು ನೆಪ ಹೇಳಿ ನಗರ, ಪಟ್ಟಣಗಳಿಗೆ ಬರುತ್ತಿದ್ದ ಜನರು ಭಾನುವಾರದ ಕರ್ಫ್ಯೂಗೆ ನಿರೀಕ್ಷೆ ಮೀರಿ ಸಹಕಾರ ನೀಡಿದರು.
ನಗರದಲ್ಲಿ ಮೆಡಿಕಲ್ ಸ್ಟೋರ್, ಮಾಂಸ, ಮೀನು, ಹಣ್ಣು, ತರಕಾರಿ, ಹಾಲಿನ ಅಂಗಡಿಗಳು ಬಿಟ್ಟರೆ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಾಗಿಲು ತೆರೆಯಲಿಲ್ಲ. ಕರ್ಫ್ಯೂ ಜಾರಿ ಇರುವ ಹಿನ್ನೆಲೆಯಲ್ಲಿ ಬಾಗಿಲು ತೆರೆಯಬಾರದು ಎಂಬ ಜಿಲ್ಲಾಡಳಿತದ ಆದೇಶವನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಿದರು.
ಜನರು ರಸ್ತೆಗಿಳಿಯಲಿಲ್ಲ. ಕೆಲವೊಂದು ಸರಕು ಸಾಗಣೆ ವಾಹನಗಳು, ಕಾರುಗಳು, ಬೆರಳೆಣಿಕೆಯಷ್ಟು ದ್ವಿಚಕ್ರ ವಾಹನಗಳ ಸಂಚಾರ ಕಂಡುಬಂತು. ಉಳಿದಂತೆ ಆಟೋ ಸೇರಿ ಜನರನ್ನು ಸಾಗಣೆ ಮಾಡುವ ವಾಹನಗಳು ಬೀದಿಗಿಳಿಯಲಿಲ್ಲ.
ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಜತೆಗೆ ತಾಲೂಕು ಹಾಗೂ ಹೋಬಳಿ ಕೇಂದ್ರದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆ, ಮಂಡ್ಯ-ತಗ್ಗಹಳ್ಳಿ ರಸ್ತೆ, ಬನ್ನೂರು ರಸ್ತೆ, ಚಿಕ್ಕಮಂಡ್ಯ ರಸ್ತೆ, ಹೊಳಲು ರಸ್ತೆಗಳೆಲ್ಲಿ ಬೆಳಗ್ಗೆ ಕೆಲವೊತ್ತು ಒಂದಷ್ಟು ವಾಹನಗಳು ಕಂಡು ಬಂದರೆ 11 ಗಂಟೆ ಆಗುತ್ತಿದ್ದಂತೆ ಬಹುತೇಕ ಪ್ರಶಾಂತವಾಗಿತ್ತು.
ಚೆಕ್‌ಪೋಸ್ಟ್‌ಗಳಲ್ಲಿ ಕಾವಲಿರಲಿಲ್ಲ: ಕರ್ಫ್ಯೂ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ನಗರಕ್ಕೆ ಬರುವವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಬಹುತೇಕ ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರೂ ಕಾಣಲಿಲ್ಲ.
ಹಿಂದೆ ಅಳವಡಿಸಿದ್ದ ಬ್ಯಾರಿಕೇಡ್‌ಗಳಷ್ಟೇ ಕಾವಲಿಗೆ ನಿಂತಂತೆ ಕಾಣುತ್ತಿದ್ದವು. ಪೊಲೀಸರು ಇಲ್ಲ ಎಂಬ ಕಾರಣದಿಂದ ಯಾರೊಬ್ಬರು ನಗರ ಪ್ರವೇಶ ಮಾಡುವ ಪ್ರಯತ್ನ ಮಾಡಲಿಲ್ಲ. ಕಾರಣ ನಗರಕ್ಕೆ ಬಂದರೂ ಯಾವುದೇ ವಸ್ತುಗಳು ಸಿಗುತ್ತಿರಲಿಲ್ಲ. ಹಾಗಾಗಿ ಜನರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದು, ಮೆಚ್ಚುಗೆಗೆ ಪಾತ್ರವಾಯಿತು.
ಕಾಣದ ಅಂತರ: ನಗರದ ಕೆಲವೆಡೆ ಮೀನು ಮತ್ತು ಮಾಂಸ ಮಾರಾಟ ಭಾನುವಾರ ಜೋರಾಗಿತ್ತು. ಖರೀದಿಸಲು ಆಗಮಿಸಿದ್ದ ಕೆಲವರು ಮಾಸ್ಕ್ ಧರಿಸದೆ ಬಂದಿದ್ದು ಕಂಡುಬಂತು.
ಮಾಂಸ ತೆಗೆದುಕೊಳ್ಳುವ ಮೂಡ್‌ನಲ್ಲಿದ್ದ ಜನರು ಪರಸ್ಪರ ಅಂತರದ ಬಗ್ಗೆ ಪರಿಜ್ಞಾನ ಇಲ್ಲದಂತೆ ನಿಂತಿದ್ದರು. ಮಾಂಸ ಮಾರಾಟಕ್ಕೆ ಅವಕಾಶ ಸಿಕ್ಕಿದ ದಿನದಿಂದಲೂ ಹಲವೆಡೆ ಮಾಸ್ಕ್, ಅಂತರ ಕಾಣದಿರುವುದು ವಿಪರ್ಯಾಸ.
ಅಂಥ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸುವುದು ಅಥವಾ ಬಾಗಿಲು ಬಂದ್ ಮಾಡಿಸುವುದು ಸೂಕ್ತ ಎಂದು ಮಾಂಸ ಖರೀದಿಗೆ ಬಂದಿದ್ದ ಜನರೇ ಹೇಳುತ್ತಿದ್ದರು. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಗಮನಹರಿಸಲಿ ಎಂಬುದು ಪತ್ರಿಕೆಯ ಆಶಯ.
ನಿಲ್ಲದ ವಾಯುವಿಹಾರ: ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಬೀದಿಗೆ ಇಳಿಯಬಾರದು. ಮನೆಯಲ್ಲೇ ಇರಬೇಕೆಂಬ ಸರ್ಕಾರದ ನಿರ್ದೇಶನ ಹಲವು ವಾಯುವಿಹಾರಿಗಳಿಗೆ ಕೇಳಿಸಿದಂತೆ ಕಾಣಲಿಲ್ಲ.
ಜಿಲ್ಲಾಧಿಕಾರಿ ಕಚೇರಿ ಹಾಗೂ ಸರ್ ಎಂ.ವಿ. ಕ್ರೀಡಾಂಗಣ ಮತ್ತಿತರ ಕಡೆಗಳಲ್ಲಿ ವಾಯು ವಿಹಾರ ಮಾಡಲು ಜನರು ಎಂದಿನಂತೆ ಆಗಮಿಸಿ, ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದರು. ಸಾಮಾನ್ಯವಾಗಿ ವಾಯುವಿಹಾರ ಮಾಡುವವರು ಅಕ್ಷರಸ್ಥರು, ಉದ್ಯೋಗಿಗಳು, ನಗರವಾಸಿಗಳು. ಅವರೇ ನಿಯಮ ಉಲ್ಲಂಘನೆ ಮಾಡಿದರು.