

ಮಂಡ್ಯ: ಮತದಾರರಿಗೆ ಆಮಿಷ ನೀಡುವ ಮೂಲಕ ಅಧಿಕಾರಕ್ಕೆ ಬರುವಂತಹ ರಾಜಕಾರಣಿಗಳನ್ನು ದೂರವಿಡಬೇಕಿದೆ ಎಂದು ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಡಾ.ರಮೇಶ್ ಸಲಹೆ ನೀಡಿದರು.
ನಗರದ ನೆಹರು ಯುವ ಕೇಂದ್ರ(ಎನ್‌ವೈಕೆ) ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಪಂ, ವಿಕಸನ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ವಿವಿಧ ಸಂಘ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು ಸಂಘ ಸಂಸ್ಥೆ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಲ್ಲಸಲ್ಲದ ಆಸೆ ತೋರಿಸಿ ಅಧಿಕಾರ ಬರುವವರನ್ನು ಚುನಾವಣೆಯಲ್ಲಿ ಬಹಿಷ್ಕರಿಸಬೇಕು. ಅಲ್ಲಿವರೆಗೆ ಭ್ರಷ್ಟಾಚಾರ, ಶೋಷಣೆ, ಅಸಮಾನತೆ ತೊಲಗುವುದಿಲ್ಲ. ಸಮಾನ ಹಕ್ಕುಗಳು ಪಡೆದುಕೊಳ್ಳಲು ಸಮರ್ಥ ಆಡಳಿತ ವ್ಯವಸ್ಥೆ ಬರಬೇಕಿದೆ. ಭಾರತೀಯ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಆದರೆ ಮತದಾನ ಮಾತ್ರ ಸಮಾನತೆ ಸಂಕೇತ ಸಾರುವಲ್ಲಿ ಯಶಸ್ವಿಯಾಗಿದೆ, ಉಳಿದೆಡೆ ಅಸಮಾನತೆಯು ತೊಲಗಲಿಲ್ಲ ಎಂದು ಹೇಳಿದರು.
ಮಂಡ್ಯ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಪ್ರಾಧ್ಯಾಪಕ ಡಾ.ಗಣೇಶ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು, ಮಂಡ್ಯ ವಿವಿ ಉಪನ್ಯಾಸಕ ಕುಮಾರ್, ವಕೀಲ ತಿರುಮಲಾಸ್ವಾಮಿ, ವಿಕಸನ ಜಿಲ್ಲಾ ಸಂಯೋಜಕ ಕೆಂಪಯ್ಯ ಇತರರಿದ್ದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ ಅವರು ಭಾರತೀಯ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಪ್ರಮಾಣ ವಚನ ಸ್ವೀಕರಿಸಿದರು.