

ಮಂಡ್ಯ: ವಿದ್ಯುತ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಜೂ.22ರಂದು ಜಿಲ್ಲಾದ್ಯಂತ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಂದ್‌ಗೆ ಕರೆ ನೀಡಲಾಗಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯ ಅಧ್ಯಕ್ಷ ಕೆ.ಪ್ರಭಾಕರ್ ಮತ್ತು ಕಾರ್ಯದರ್ಶಿ ಎಸ್.ಸತೀಶ್‌ಬಾಬು, ಕೈಗಾರಿಕೆಗಳು ಹಾಗೂ ಗೃಹ ವಿದ್ಯುತ್ ದರಗಳನ್ನು ಏಕಾಏಕಿ ಶೇ.30 ರಿಂದ 70ರಷ್ಟು ಹೆಚ್ಚು ಮಾಡಲಾಗಿದೆ. ಹೆಚ್ಚುವರಿ ಮಾಡಿರುವ ವಿದ್ಯುತ್ ದರ ಅವೈಜ್ಞಾನಿಕವಾಗಿದೆ. ದರ ಹೆಚ್ಚಳದಿಂದಾಗಿ ಅದರಲ್ಲೂ ಮುಖ್ಯವಾಗಿ ಕೈಗಾರಿಕಾ ವಲಯ ಹಾಗೂ ವ್ಯಾಪಾರಗಳನ್ನು ನಡೆಸಲು ಆಗದೆ ಮುಚ್ಚುವ ಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 22ರಂದು ಇಡೀ ದಿನ ಜಿಲ್ಲಾದ್ಯಂತ ಕೈಗಾರಿಕೆಗಳು, ವರ್ತಕರು, ವಾಣಿಜ್ಯೋದ್ಯಮಿಗಳಿಂದ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತಿದೆ. ಈ ಸಂಬಂಧ ಸಹಕರಿಸುವಂತೆ ವ್ಯಾಪಾರಸ್ಥರಿಗೆ ಮನವಿ ಮಾಡಲಾಗಿದೆ. ಅಂತೆಯೇ ಅಂದು ಬೆಳಗ್ಗೆ 10 ಗಂಟೆಗೆ ನಗರದ ಜೈನರ ಬೀದಿಯಲ್ಲಿರುವ ಮಹಾವೀರ ಭವನದಿಂದ ವಾಣಿಜ್ಯ ಮಂಡಳಿ ಹಾಗೂ ಸಂಘ ಸಂಸ್ಥೆಗಳ ಮುಖಂಡರು, ವ್ಯಾಪಾರಸ್ಥರು, ಉದ್ಯಮಿಗಳು ಒಗ್ಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಮೌನ ಪ್ರತಿಭಟನೆ ಮೂಲಕ ತೆರಳಿ ಮನವಿ ಸಲ್ಲಿಸಲಿದ್ದೇವೆ. ಆದ್ದರಿಂದ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.