

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್‌ನಂತೆ ಹದಿನೈದು ದಿನ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೆ.23ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ.
ನಗರದ ಸರ್‌ಎಂವಿ ಪ್ರತಿಮೆ ಮುಂದೆ ಈಗಾಗಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸಮಿತಿಯು ಗುರುವಾರ ವಿವಿಧ ಸಂಘಟನೆಗಳೊಂದಿಗೆ ಆಯೋಜಿಸಿದ ಸಭೆಯಲ್ಲಿ ಚರ್ಚಿಸಿ ಮಂಡ್ಯ ಬಂದ್ ಕರೆ ಸೇರಿದಂತೆ 6 ಪ್ರಮುಖ ನಿರ್ಣಯ ಕೈಗೊಂಡಿದೆ. ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಲಾಯಿತು.
ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟವು ಈಗಾಗಲೇ 97 ಅಡಿಗೆ ಕುಸಿದಿದೆ. ಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು ಯಾವುದಕ್ಕೂ ಸಾಲದಾಗಿದೆ. ಬೇಸಿಗೆಗೂ ಮುನ್ನವೇ ಇನ್ನೆರಡು ತಿಂಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ತ.ನಾಡಿಗೆ ನೀರು ಹರಿಸುವಂತೆ ಕೋರ್ಟ್ ಆದೇಶ ಮಾಡಿರುವುದು ಯಾವ ನ್ಯಾಯ?. ಈಗಾಗಲೇ ರಾಜ್ಯ ಸರ್ಕಾರ ತ.ನಾಡಿಗೆ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಅಂಬುಜಮ್ಮ, ಮೀರಾ ಶಿವಲಿಂಗಯ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಹಿರಿಯ ಸಹಕಾರಿ ಕೀಲಾರ ಕೃಷ್ಣ, ಸಾಮಾಜಿಕ ಹೋರಾಟಗಾರ ಎಂ.ಎಲ್.ತುಳಸೀಧರ್, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ದಸಂಸ ಮುಖಂಡ ಎಂ.ವಿ.ಕೃಷ್ಣ ಇತರರಿದ್ದರು.
ಸಮಿತಿ ತೆಗೆದುಕೊಂಡ ನಿರ್ಣಯ
* ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿರುವುದು ಖಂಡನೀಯ.
* ಸರ್ವಪಕ್ಷಗಳ ತೀರ್ಮಾನದಂತೆ ಕಾವೇರಿ ಜಲಾನಯನ ಪ್ರದೇಶದ ಜನ-ಜಾನುವಾರುಗಳಿಗೆ ಅವಶ್ಯಕವಾಗಿರುವ ಕುಡಿಯುವ ನೀರಿಗೆ ಆದ್ಯತೆ ನೀಡುವುದರ ಜತೆಗೆ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.
* ಕಾವೇರಿ ವಿಚಾರದಲ್ಲಿ ರಾಜ್ಯಕ್ಕಾಗಿ ಅನ್ಯಾಯದ ವಿರುದ್ಧ ರಾಜ್ಯಸರ್ಕಾರವು ತಕ್ಷಣವೇ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು.
* ರಾಷ್ಟ್ರೀಯ ಜಲ ನೀತಿಯ ಘೋಷಣೆಯಂತೆ ಕುಡಿಯುವ ನೀರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರವೂ ಬದ್ಧವಾಗಿರಬೇಕು. ಕಾವೇರಿ ಜಲಾನಯನದ ರೈತರು ಮತ್ತು ಜನರ ಪರವಾಗಿ ನಿಲ್ಲಬೇಕು.
* ಸೆ.23ರಂದು ಮಂಡ್ಯ ಬಂದ್ ನಡೆಸುವುದು.
* ಬಂದ್ ಕರೆ ಹಿನ್ನಲೆಯಲ್ಲಿ ಸೆ.22ರಂದು ಬೆಳಗ್ಗೆ 11ಕ್ಕೆ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿ ಸ್ಥಳದಲ್ಲಿ ಜಿಲ್ಲೆಯ ಸಂಘಟನೆಗಳ ಪ್ರತಿನಿಧಿಗಳು, ಹಾಲಿ ಮತ್ತು ಮಾಜಿ ಶಾಸಕರು, ಹಿರಿಯ ರಾಜಕಾರನಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು, ವರ್ತಕರು, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ನಾಗರಿಕರ ಸಭೆ ನಡೆಸುವುದು.