

ಮಂಡ್ಯ: ಅಭಿನವ ಭಾರತಿ ಶಿಕ್ಷಣ ಟ್ರಸ್ಟ್ ಸಂಸ್ಥಾಪಕ ದಿವಗಂತ ಅನಂತಕುಮಾರ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಭಾನುವಾರ ಇಲ್ಲಿನ ಶಂಕರನಗರದ ಅಭಿನವ ಭಾರತಿ ಪಿಯು ಕಾಲೇಜಿನ ಕ್ರೀಡಾಂಗಣದ ಆವರಣದಲ್ಲಿ ಆಯೋಜಿಸಲಾಗಿತ್ತು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಮಾತನಾಡಿ, ಅನಂತಕುಮಾರ ಸ್ವಾಮೀಜಿ ಅವರು ನಗರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿದ್ದಾರೆ. ನಾನು ಇದೇ ಶಾಲೆಯಲ್ಲಿ ಓದಿದ್ದು, ಅಮೆರಿಕದಿಂದ ಬಂದ ನಂತರ ಅವರೊಂದಿಗೆ ಸೇರಿ ಶಿಕ್ಷಣ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ಸ್ವಾಮೀಜಿ ಅವರ ಆಧ್ಯಾತ್ಮಿಕ ಚಿಂತನೆ ಬಹಳಷ್ಟು ಪ್ರಭಾವ ಬೀರಿತ್ತು. ನನ್ನ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದೇನೆ. 10 ವರ್ಷ ಅಮೆರಿಕದಲ್ಲಿ ಬಹಳಷ್ಟು ಸಂಪಾದಿಸಿದ್ದೇನೆ. ಇದಕ್ಕೆ ಅವರ ಆಶೀರ್ವಾದವೇ ಕಾರಣ. ನಮಗೆಲ್ಲರಿಗೂ ಬಹಳಷ್ಟು ಆತ್ಮಸ್ಥೈರ್ಯ ತುಂಬುತ್ತಿದ್ದರು. ನನ್ನ ಸಾಧನೆಗೆ ಸ್ವಾಮೀಜಿ ಅವರೇ ಕಾರಣ. ಅವರ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ನನ್ನನ್ನು ಕರೆಸಿಕೊಂಡು, ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿದರು. ಅವರ ಪ್ರೀತಿ, ವಿಶ್ವಾಸವನ್ನು ಎಂದೂ ಮರೆಯುವಂತಿಲ್ಲ ಎಂದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿಶ್ವವಿದಾನಂದ ಸ್ವಾಮೀಜಿ ಮಾತನಾಡಿ, ಸಿದ್ಧಿ ಪುರುಷರು ಸಾವಿರ ಜನರಲ್ಲಿ ಒಬ್ಬರಿರುತ್ತಾರೆ. ಅವರಲ್ಲಿ ಅನಂತಕುಮಾರ ಸ್ವಾಮೀಜಿ ಒಬ್ಬರು. ಅವರು ನಮ್ಮೊಂದಿಗೆ ಇದ್ದಾಗ ಮಹತ್ವ ಗೊತ್ತಾಗುವುದಿಲ್ಲ. ಸ್ವಾಮೀಜಿ ಅವರು ಬಿಟ್ಟು ಹೋದ ನಂತರ ಅವರ ಮಹತ್ವ ನಮಗೆ ಅರಿವಾಗುತ್ತಿದೆ. ಸ್ವಾಮೀಜಿ ಅವರು ಶಿಕ್ಷಣ ಸಂಸ್ಥೆ ಜತೆಗೆ ಆಧ್ಯಾತ್ಮಿಕ ಕೇಂದ್ರ ಆರಂಭಿಸಿ ಹಲವಾರು ಚಟುವಟಿಕೆಗಳ ಮೂಲಕ ನಮ್ಮೊಂದಿಗಿದ್ದಾರೆ. ಅವರ ಸೇವೆಯನ್ನು ಸದಾ ಸ್ಮರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಅಭಿಮಾನ ಪ್ರಕಾಶನದ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ವೆಂಕಟೇಶ್, ಬ್ರಾಹ್ಮಣ ಸಭಾ ಗೌರವಾಧ್ಯಕ್ಷ ಬೆಳ್ಳೂರು ಶಿವರಾಮ್, ಟ್ರಸ್ಟಿಗಳಾದ ಶಿವನಂಜೇಗೌಡ, ಎಚ್.ಶ್ರೀನಿವಾಸ್, ಮುಖ್ಯ ಶಿಕ್ಷಕ ನಾಗೇಂದ್ರ ಇತರರಿದ್ದರು.