

ಮಂಡ್ಯ: ಪ್ರಸಿದ್ಧ ಧಾರ್ಮಿಕ ಕೇಂದ್ರ ಮೇಲುಕೋಟೆಯಲ್ಲಿ ಜ.31 ಮತ್ತು ಫೆ.1ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸಮ್ಮೇಳನದ ಲಾಂಛನ, ಫೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜ.31ರಂದು ಬೆಳಗ್ಗೆ 8.30ಕ್ಕೆ ಮೇಲುಕೋಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಆವರಣದಲ್ಲಿ ಪಾಂಡವಪುರ ಎಸಿ ಶೈಲಜಾ ರಾಷ್ಟ್ರ ಧ್ವಜರೋಹಣ ಮಾಡಲಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ನಾಡಧ್ವಜ ಮತ್ತು ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. 10ಕ್ಕೆ ಶನಿದೇವರ ದೇವಸ್ಥಾನದ ಎದುರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದು, ವಿಶ್ರಾಂತ ಪ್ರಾಂಶುಪಾಲ ಡಾ.ಭಾಷ್ಯಂ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಿಸಿ ಡಾ.ಎಂ.ವಿ.ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಅಲ್ಲಿಂದ ಹೊರಡುವ ಮೆರವಣಿಗೆ ಚೆಲುವನಾರಾಯಣಸ್ವಾಮಿ ದೇವಸ್ಥಾನ ಮೂಲಕ ಪ್ರಧಾನ ವೇದಿಕೆಗೆ ಆಗಮಿಸಲಿದೆ ಎಂದರು.
ಪು.ತಿ.ನ ಪ್ರಧಾನ ವೇದಿಕೆಯಲ್ಲಿ 11ಗಂಟೆಗೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾವು ಆಶಯ ನುಡಿಗಳನ್ನಾಡುವೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಂಸದೆ ಸುಮಲತಾ ಅಂಬರೀಷ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲಯನ್ಸ್ ಮಾಜಿ ಜಿಲ್ಲಾ ಗೌವರ್ನರ್ ಕೆ.ದೇವೇಗೌಡ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷೆ ಎಸ್.ನಾಗರತ್ನಸ್ವಾಮಿ ಚಾಲನೆ ನೀಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಮಣ್ಯ ಪ್ರಮುಖ ಭಾಷಣ ಮಾಡಲಿದ್ದಾರೆ. ಇದೇ ವೇಳೆ ನೂತನ ಕೆಎಎಸ್ ಅಧಿಕಾರಿಗಳಿಗೆ ಅಭಿನಂದನೆ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಮಧ್ಯಾಹ್ನ 2.30ರಿಂದ ಚಿಕ್ಕಮಗಳೂರು ಉಪವಿಭಾಗದ ಎಸಿ ಡಾ.ಎಚ್.ಎಲ್.ನಾಗರಾಜು ಅಧ್ಯಕ್ಷತೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಚ್.ಎಲ್.ಮಹದೇವ ಹುಲ್ಲುಕೆರೆ ಅವರು ವಿಚಾರ ಗೋಷ್ಠಿ ಉದ್ಘಾಟಿಸಲಿದ್ದಾರೆ. 4.30ರಿಂದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚಿ ಅಧ್ಯಕ್ಷತೆಯಲ್ಲಿ ವಿಶೇಷ ಉಪನ್ಯಾಸ, ಸಂಜೆ 5ಗಂಟೆಗೆ ಕನ್ನಡ ಪ್ರಾಧ್ಯಾಪಕ ಡಾ.ಮಾ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಅಂಕಣಕಾರ ಎಚ್.ದುಂಡಿರಾಜ್ ಉದ್ಘಾಟಿಸಲಿದ್ದಾರೆ. 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿ.ಎಸ್.ಪುಟ್ಟರಾಜು ತಿಳಿಸಿದರು.
ಫೆ.1ರಂದು ಬೆಳಗ್ಗೆ 10ಗಂಟೆಗೆ ಸಾಹಿತಿ ಡಾ.ಎನ್.ಎಸ್.ತಾರಾನಾಥ್ ಅಧ್ಯಕ್ಷತೆಯ ವಿಚಾರಗೋಷ್ಠಿಯನ್ನು ಸಾಹಿತಿ ಪ್ರೊ.ಬಿ.ನಾರಾಯಣಗೌಡ ಉದ್ಘಾಟಿಸಲಿದ್ದಾರೆ. 12ಗಂಟೆಯಿಂದ ಆರಂಭವಾಗುವ ವಿಚಾರಗೋಷ್ಠಿಯನ್ನು ಹಿರಿಯ ಪತ್ರಕರ್ತ ಡಾ.ಎನ್.ಜಗದೀಶ್ ಕೊಪ್ಪ ಉದ್ಘಾಟಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ಬೋರೇಗೌಡ ಚಿಕ್ಕಮರಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2.30ರಿಂದ ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಮಣ್ಯ ಅವರೊಂದಿಗೆ ಸಂವಾದ ಗೋಷ್ಠಿ ಇದೆ. ಸಂಜೆ 4.30ರಿಂದ ಲಯನ್ಸ್ ಮಾಜಿ ಜಿಲ್ಲಾ ಗೌವರ್ನರ್ ಕೆ.ದೇವೇಗೌಡ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭವಿದ್ದು, ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 60 ಜನರನ್ನು ವಿಶ್ರಾಂತ ಕುಲಸಚಿವ ಡಾ.ಕೆ.ಎನ್.ನಿಂಗೇಗೌಡ ಸನ್ಮಾನಿಸಲಿದ್ದಾರೆ ಎಂದರು.
ಸಂಜೆ 5.30ರಿಂದ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷರನ್ನು 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಸನ್ಮಾನಿಸಲಿದ್ದಾರೆ ಎಂದು ಸಿ.ಎಸ್.ಪುಟ್ಟರಾಜು ವಿವರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಮನ್‌ಮುಲ್ ಅಧ್ಯಕ್ಷ ರಾಮಚಂದ್ರು, ಲಯನ್ಸ್ ಮಾಜಿ ಜಿಲ್ಲಾ ಗೌವರ್ನರ್ ಕೆ.ದೇವೇಗೌಡ, ವಿ.ವೆಂಕಟರಾಮೇಗೌಡ, ಯೋಗೇಶ್, ಎಸ್.ಕೆ.ಮಹೇಶ್‌ಸುಂಡಹಳ್ಳಿ, ದಸರಗುಪ್ಪೆ ಧನಂಜಯ ಇತರರಿದ್ದರು.