ಜಿಲ್ಲೆಯಲ್ಲಿ ಮತ್ತೆ 17 ಜನರಿಗೆ ಕರೊನಾ ದೃಢ

18_05_Mdy_Discharge
Published on

ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 17 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆಯಾಗಿ ಶತಕದತ್ತ ದಾಪುಗಾಲಿಟ್ಟಿದೆ.
ಸೋಮವಾರ ಮಧ್ಯಾಹ್ನ ಬಿಡುಗಡೆಯಾದ ಬುಲೆಟಿನ್‌ನಲ್ಲಿ ಕೆ.ಆರ್.ಪೇಟೆಯ 13 ಜನರು, ಮಂಡ್ಯ ತಾಲೂಕಿನ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಮುಂಬೈನ ಸಂತಾ ಕ್ರೂಸ್, ನೆಹರುನಗರ ಮೊದಲಾದ ಕಡೆಗಳಲ್ಲಿ ವಿವಿಧ ಕೆಲಸ ಮಾಡುತ್ತಿದ್ದ 13 ಜನ ಮೇ 11ರಂದು ಮುಂಬೈ, ಪುಣೆ, ಸತಾರ್, ನಿಪ್ಪಾಣಿ ಮೂಲಕ ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಚೆಕ್‌ಪೋಸ್ಟ್‌ಗೆ ಮೇ 12ರಂದು ಬಂದರು. ಅಲ್ಲಿ ಅವರನ್ನು ಪರಿಶೀಲಿಸಿ ಕ್ವಾರಂಟೈನ್‌ಗೆ ಕಳಿಸಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.
ಅವರ ವರದಿ ಬಂದಿದ್ದು, 16ರ ವರ್ಷದ ಪುರುಷ ಪಿ.1210, 25 ವರ್ಷದ ಮಹಿಳೆ ಪಿ.1212, 28 ವರ್ಷದ ಪುರುಷ ಪಿ.1213, 50 ವರ್ಷದ ಮಹಿಳೆ ಪಿ.1214, 10 ವರ್ಷದ ಗಂಡು ಮಗು ಪಿ.1215, 42 ವರ್ಷದ ಪುರುಷ ಪಿ.1216, 31 ವರ್ಷದ ಪುರುಷ ಪಿ.1217, 24 ವರ್ಷದ ಮಹಿಳೆ ಪಿ.1218, 35 ವರ್ಷದ ಪುರುಷ ಪಿ.1219, 24 ವರ್ಷದ ಪುರುಷ ಪಿ.1220, 33 ವರ್ಷದ ಪುರುಷ ಪಿ.1221, 4 ವರ್ಷದ ಬಾಲಕ ಪಿ.1222, 40 ವರ್ಷದ ಮಹಿಳೆ ಪಿ.1223 ಆಗಿದ್ದಾರೆ.
ಎಲ್ಲರನ್ನು ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಈ ಪೈಕಿ 21 ಜನರು ಗುಣಮುಖರಾಗಿದ್ದಾರೆ. ಇಬ್ಬರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಮಂಡ್ಯ ತಾಲೂಕಿನವರಿಗೂ ಬಂತು: ಈ ಮೊದಲು ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯ ನಂಟಿನಿಂದ ನಗರದ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದರಿಂದ ಮಂಡ್ಯ ತಾಲೂಕಿನಲ್ಲಿ ಯಾವುದೇ ಪ್ರಕರಣ ಇಲ್ಲವೆಂಬ ನೆಮ್ಮದಿಯಿತ್ತು.
ಈಗ ತಾಲೂಕಿನ ನಾಲ್ವರಿಗೆ ಸೋಂಕು ದೃಢವಾಗಿದೆ. ಮಂಡ್ಯ ತಾಲೂಕಿನ ಕೆರಗೋಡು ಹೋಬಳಿಯ ಗ್ರಾಮವೊಂದರ 8 ವರ್ಷದ ಮಗುವಿಗೆ ಪಿ.1228 ಸೋಂಕು ದೃಢಪಟ್ಟಿದ್ದರೆ, ಕೀಲಾರ ಹೋಬಳಿಯ ಗ್ರಾಮವೊಂದರ 30 ವರ್ಷದ ವ್ಯಕ್ತಿ ಪಿ.1229 ಇಟ್ಟು ರುಬ್ಬುವ ಯಂತ್ರದ ಗಿರಣಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಸೋಂಕು ದೃಢವಾಗಿದೆ.
ಜತೆಗೆ ಇವರ 8 ವರ್ಷದ ಮಗಳು ಪಿ.1230, 3 ವರ್ಷದ ಮಗಳು ಪಿ.1231 ಕೂಡ ಸೋಂಕಿತರಾಗಿದ್ದಾರೆ. ಇವರೆಲ್ಲರೂ 12ರಂದು ಕಾರಿನಲ್ಲಿ ಬೆಳ್ಳೂರು ಕ್ರಾಸ್‌ನ ಚೆಕ್‌ಪೋಸ್ಟ್‌ಗೆ ಬಂದಿದ್ದರು. ಇವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿದ್ದು 13ರಂದು ವರದಿ ಬಂದಿದೆ. ಇವರನ್ನು ಕೂಡ ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಹಾಸ್ಟೆಲ್ ಕ್ವಾರಂಟೈನ್‌ನಿಂದ ನಿಟ್ಟುಸಿರು: ಮುಂಬೈನಿಂದ ಬರುತ್ತಿರುವವರನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ಪರಿಶೀಲಿಸಿ ವಸತಿ ಕ್ವಾರಂಟೈನ್ ಮಾಡಿ, ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಪಾಸಿಟಿವ್ ಬಂದವರನ್ನು ಐಸೋಲೇಷನ್ ವಾರ್ಡ್‌ಗೆ ಕಳುಹಿಸಿದರೆ, ಅಂಥವರ ಪ್ರಥಮ ಸಂಪರ್ಕಿತರನ್ನು 14 ದಿನ, ಅನುಮಾನ ಬಂದಲ್ಲಿ 20 ಅಥವಾ ಅಗತ್ಯವಿರುವಷ್ಟು ದಿನ ಅಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ.
ಪರಿಣಾಮ ಸೋಂಕಿತರು ಹಳ್ಳಿಗಳಿಗೆ ಹೋಗಲು ಅವಕಾಶ ಸಿಗುತ್ತಿಲ್ಲ. ಇವರು ನೇರವಾಗಿ ಹಳ್ಳಿಗಳಿಗೆ ಹೋಗಿದ್ದರೆ, ಸೋಂಕಿತರಿಂದ ನೂರಾರು ಜನರಿಗೆ ಹರಡುತ್ತಿತ್ತು. ಆ ಕಾರಣದಿಂದಲೇ ಜಿಲ್ಲಾಧಿಕಾರಿ ಪದೇ ಪದೆ ವಸತಿ ಕ್ವಾರಂಟೈನ್‌ಗೆ ಸಹಕರಿಸಿ ಎಂದು ಮನವಿ ಮಾಡುತ್ತಿದ್ದಾರೆ. ಆದರೂ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿರುವುದು ವಿಪರ್ಯಾಸ.
ಅರ್ಧ ಶತಕ ದಾಟಿದ ಕೆ.ಆರ್.ಪೇಟೆ: ಜಿಲ್ಲೆಯ 7 ತಾಲೂಕುಗಳ ಪೈಕಿ ಈಗಾಗಲೇ 6 ತಾಲೂಕುಗಳಲ್ಲಿ ಕರೊನಾ ಕಂಡಿದೆ. ಶ್ರೀರಂಗಪಟ್ಟಣ ತಾಲೂಕು ಮಾತ್ರ ಸೋಂಕಿನಿಂದ ಮುಕ್ತವಾಗಿದೆ.
ಏಪ್ರಿಲ್ ಕೊನೆಯ ತನಕ ನಮ್ಮದಿಯಿಂದ ಇದ್ದ ಕೆ.ಆರ್.ಪೇಟೆ, ಪಾಂಡವಪುರ ತಾಲೂಕಿಗೆ ಮೇಲುಕೋಟೆ ಸಮೀಪದ ಕೊಡಗಹಳ್ಳಿಯ ಮೂವರು, ಕೆ.ಆರ್.ಪೇಟೆಯ ರಾಜಘಟ್ಟದ ಮಹಿಳೆಗೆ ಮೇ 1ರಂದು ಸೋಂಕು ದೃಢಪಟ್ಟಿತು.
ಪಾಂಡವಪುರ ಅಷ್ಟಕ್ಕೆ ನಿಂತರೆ ಕೆ.ಆರ್.ಪೇಟೆಗೆ ಮುಂಬೈನಿಂದ ಬಂದವರ ಸಂಖ್ಯೆ ಹೆಚ್ಚುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತ ಸಾಗಿ, ಈಗ ಅರ್ಧ ಶತಕ ದಾಟಿದೆ. ಇದು ಶತಕ, ದ್ವಿಶತಕ ದಾಟುವ ಆತಂಕ ಕಾಡುತ್ತಿದೆ.
ಇನ್ನೂ ಒಂದು ಪ್ರಕರಣ ಇರದಿದ್ದ ಮದ್ದೂರು ತಾಲೂಕಿಗೆ ಕೋಲಾರದ ಕೋರ್ಟ್ ನೌಕರ ಆಗಮಿಸಿ ಖಾತೆ ತೆರೆದಿದ್ದಾನೆ. ಮಾತ್ರವಲ್ಲ 1 ದಿನ ತವರು ಕಡಿಲುವಾಗಿಲುವಿನಲ್ಲಿ ಉಳಿದಿದ್ದು, ಸದ್ಯ ಆ ಗ್ರಾಮದ ನೂರು ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ.
ಮಳವಳ್ಳಿಗೆ ಮತ್ತೆ ಕಾಡುವುದೇ?: ತಬ್ಲಿಘಿಗಳಿಂದಾಗಿ 19 ಜನರಿಗೆ ಸೋಂಕು ತಗುಲಿದ್ದರಿಂದ ನೆಮ್ಮದಿ ಕಳೆದುಕೊಂಡಿದ್ದ ಮಳವಳ್ಳಿ ನಿಟ್ಟುಸಿರು ಬಿಟ್ಟಿತ್ತು. ಆದರೆ, ಕೋಲಾರದ ನೌಕರ ದಳವಾಯಿ ಕೋಡಿಹಳ್ಳಿಯ ಪತ್ನಿ ಮನೆಯಲ್ಲಿ 14 ದಿನ ಇದ್ದ ಕಾರಣ ಮತ್ತೆ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.
ಪತ್ನಿ ಮನೆ ಅವಿಭಕ್ತ ಕುಟುಂಬವಾಗಿದ್ದು 17 ಜನರಿದ್ದಾರೆ. ಇವರು ಸೇರಿ 180 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಸೋಂಕಿತನ ಪ್ರಥಮ ಸಂಪರ್ಕದಲ್ಲಿದ್ದವರಿಗೆ ಪಾಸಿಟಿವ್ ಬರುವ ಸಾಧ್ಯತೆಗಳು ಅಧಿಕವಾಗಿವೆ.
ನಾಗಮಂಗಲ ತಾಲೂಕಿನಲ್ಲಿ ಮೊದಲಿಗೆ ಕಾಣಿಸಿಕೊಂಡ ವ್ಯಕ್ತಿ ಗುಣಮುಖನಾಗಿದ್ದು, ಹೊಸದಾಗಿ ಮೂರು ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net