ಮುಂಡ್ಲಿ ಅಣೆಕಟ್ಟು ಗೇಟ್ ಕಾಮಗಾರಿಗೆ ಗ್ರಾಪಂ ಆಕ್ಷೇಪ

kindi new
Published on

ಕಾರ್ಕಳ: ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿರುವ ದುರ್ಗ ಗ್ರಾಮದ ಮುಂಡ್ಲಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿಗೆ ಹೊಸದಾಗಿ ಹೈಡ್ರಾಲಿಕ್ ಗೇಟ್ ಅಳವಡಿಕೆಗೆ ಕಾಮಗಾರಿ ನಡೆಯುತ್ತಿದ್ದು, ಈ ಕುರಿತು ದುರ್ಗ ಗ್ರಾಪಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈಗಾಗಲೇ ಅಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸಲಾಗಿದ್ದರೂ ಯಾವುದೇ ತಾಂತ್ರಿಕ ಅಳತೆಗೋಲು ಇಲ್ಲದೇ ನಿರ್ವಹಿಸಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಗೆ ಇದು ವಿರುದ್ಧವಾಗಿದೆ. ಅಣೆಕಟ್ಟಿನ ತಳಭಾಗದಲ್ಲಿ ಶಾಶ್ವತ ಕಾಂಕ್ರೀಟ್‌ನಿಂದ ಮುಚ್ಚಿ ಅದರ ಮೇಲ್ಭಾಗದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸಿರುವುದರಿಂದ ಒಂದು ಹಂತದವರೆಗೆ ನೀರು ನಿಂತು ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣವಾಗುತ್ತಿರುವುದು ಇಲ್ಲಿ ಪ್ರತಿವರ್ಷ ಸಾಮಾನ್ಯವಾಗಿದೆ. ಇದರಿಂದ ಫಲವತ್ತಾದ ಕೃಷಿನಾಶವಾಗುತ್ತಿದೆ. ಜಿವಿಪಿ ಇನ್‌ಫ್ರಾ ಪ್ರೊಜೆಕ್ಟ್ ಕಂಪನಿ ಇದೇ ಅಣೆಕಟ್ಟಿನ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿ ಲಾಭ ಪಡೆಯುತ್ತಿದೆ, ಆದರೆ ಗ್ರಾಮಸ್ಥರ ಸಮಸ್ಯೆ ಬಗ್ಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಪುರಸಭೆಗೆ ಆಕ್ಷೇಪ ಸಲ್ಲಿಕೆ

ಗ್ರಾಮಸ್ಥರ ಅಭಿಪ್ರಾಯಗಳನ್ನು ಪ್ರಮುಖವಾಗಿಟ್ಟುಕೊಂಡು ದುರ್ಗ ಗ್ರಾಪಂ ಅಧ್ಯಕ್ಷ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ಕಾರ್ಕಳ ಪುರಸಭಾ ಮುಖ್ಯಾಧಿಕಾರಿಗೆ ಲಿಖಿತವಾಗಿ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಹೈಡ್ರಾಲಿಕ್ ಗೇಟ್ ಅಳವಡಿಸಿಯೂ ಯಾವುದೇ ಉಪಯೋಗಕ್ಕೆ ಬಾರದ ಸ್ಥಿತಿ ಇದೆೆ. ಆದುದರಿಂದ ತಾಂತ್ರಿಕವಾಗಿ ಅನುಮೋದಿತ ನಕಾಶೆ ಹಾಗೂ ವರದಿಯ ಪ್ರತಿಯನ್ನು ನೀಡುವಂತೆ ಮನವಿ ಪತ್ರದಲ್ಲಿ ಕೋರಿರುವುದು ಮುಂದಿನ ದಿನಗಳಗಳಲ್ಲಿ ದುರ್ಗಾ ಗ್ರಾಪಂ ಹಾಗೂ ಕಾರ್ಕಳ ಪುರಸಭೆ ನಡೆ ಯಾವ ರೀತಿಯಲ್ಲಿ ಇರುವುದೆಂದು ಕಾದು ನೋಡಬೇಕಾಗಿದೆ.

ಪುರಸಭೆಯ ಜನತೆಗೆ ಸ್ವರ್ಣ ನದಿಯ ನೀರು ಆಸರೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಿಂಡಿಅಣೆಕಟ್ಟಿನ ಪರಿಸರದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪ್ರತಿವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಗಮನಕ್ಕೆ ತಂದು, ಗ್ರಾಮಸ್ಥರ ವಿಶ್ವಾಸದೊಂದಿಗೆ ಹೆಚ್ಚುವರಿ ಕಾಮಗಾರಿ ಮುಂದುವರಿಸಬೇಕು.

-ಸತೀಶ್ ನಾಯಕ್, ದುರ್ಗ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net