

ಮಂಗಳೂರು: ನಾಡಿನ ಹಿರಿಯ ಸಾಹಿತಿಯಾಗಿದ್ದ ಮಂದಾರ ದಿ.ಕೇಶವ ಭಟ್ ಹುಟ್ಟಿ ಬೆಳೆದ ಶತಮಾನ ಕಂಡ ‘ಮಂದಾರ’ ಮನೆ ತ್ಯಾಜ್ಯ ರಾಶಿ ನಡುವೆ ಶಿಥಿಲಗೊಳ್ಳುತ್ತಿದೆ. ಕಳೆದ ಮಳೆಗಾಲದಲ್ಲಿ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ರಾಶಿ ಹರಿದು ಬಂದು ಮಂದಾರ ಮನೆಗೆ ಅಪ್ಪಳಿಸಿದ ಪರಿಣಾಮ ಪ್ರಸಿದ್ಧ ಸಾಹಿತಿಯೊಬ್ಬರನ್ನು ನಾಡಿಗೆ ಪರಿಚಯಿಸಿದ ಮನೆ ಇತಿಹಾಸ ಪುಟ ಸೇರುವ ಸ್ಥಿತಿಯಲ್ಲಿದೆ.
ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಮಂದಾರದಲ್ಲಿ 1919ರ ಜ.6ರಂದು ಕೇಶವ ಭಟ್ ಜನಿಸಿದ್ದರು. ಕೃಷಿಯೇ ಕುಟುಂಬದ ಮೂಲ ಕಸುಬಾದರೂ ಅವರು ಕೃಷಿ ಜತೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು.
ಕನ್ನಡ ಹಾಗೂ ತುಳು ಭಾಷೆಯ ಲೇಖಕ, ವಿದ್ವಾಂಸ, ಕನ್ನಡ ಹಾಗೂ ತುಳುವಿನಲ್ಲಿ ಕಾವ್ಯ, ಯಕ್ಷಗಾನ, ವಿಮರ್ಶೆ, ವ್ಯಾಕರಣ, ಸಂಶೋಧನೆಯ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿ ಅಗ್ರಗಣ್ಯ ಸಾಹಿತಿಯಾಗಿ ಬೆಳೆದು ಬಂದ ಕೇಶವ ಭಟ್ಟರು ತುಳು ಮಹಾಕಾವ್ಯ ಆಕರ ಗ್ರಂಥ ‘ಮಂದಾರ ರಾಮಾಯಣ’ ಬರೆದು ಇಡೀ ನಾಡಿನಲ್ಲಿ ಮಂದಾರ ಕೇಶವ ಭಟ್ ಎಂದೇ ಪ್ರಸಿದ್ಧಿಗೆ ಬಂದಿದ್ದರು.
ದೇಶದಲ್ಲಿ ಪ್ರಥಮ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಕ್ಕೆ ಪಾತ್ರರಾಗಿದ್ದ ಶ್ರೇಷ್ಠ ಸಾಹಿತಿಯೊಬ್ಬರ ಮನೆ ಇಂದು ಪಚ್ಚನಾಡಿ ಕಸದ ರಾಶಿ ನಡುವೆ ಸಿಲುಕಿಕೊಂಡಿದೆ. ಕುಟುಂಬ ಅನಾದಿ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ನಾಗ ಬನ, ದೈವಸ್ಥಾನ ಸಹಿತ ಎಲ್ಲವೂ ತ್ಯಾಜ್ಯ ರಾಶಿಯ ಅಡಿಯಲ್ಲಿದೆ.
2019ರಲ್ಲಿ ಮಂದಾರ ಕೇಶವ ಭಟ್ ಅವರದ್ದು ಜನ್ಮಶತಮಾನೋತ್ಸವ. ಇದೇ ವೇಳೆ ಅವರು ಹುಟ್ಟಿ ಬೆಳೆದ ಮನೆಯೂ ಭರ್ತಿ ನೂರು ವರ್ಷ ಪೂರೈಸಿದೆ. ದಿ.ಕೇಶವ ಭಟ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ತ್ಯಾಜ್ಯ ರಾಶಿ ಹರಿದು ಬಂದು ಪರಿಸರವನ್ನು ನಾಶ ಮಾಡಿತ್ತು ಎಂದು ಮಂದಾರ ರಾಜೇಶ್ ಭಟ್ ವಿಜಯವಾಣಿಗೆ ತಿಳಿಸಿದ್ದಾರೆ.
ಸಂತ್ರಸ್ತರು ಅತಂತ್ರ: ಮಂದಾರ ಪ್ರದೇಶದಲ್ಲಿ ಪಾರಂಪರಿಕ ಮನೆ ಸಹಿತ 27 ಮನೆಗಳು ಪೂರ್ಣ ಹಾಗೂ 27 ಮನೆಗಳು ಭಾಗಶಃ ಹಾನಿಯಾಗಿತ್ತು. ಪೂರ್ಣವಾಗಿ ಸಂತ್ರಸ್ತರಾದ 27 ಕುಟುಂಬಗಳಿಗೆ ಬೈತುರ್ಲಿಯ ಗೃಹಮಂಡಳಿ ವಸತಿ ಸಮುಚ್ಚಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವರಿಗೆ ಒಂದಷ್ಟು ಕೃಷಿ ನಷ್ಟ ಬಿಟ್ಟರೆ ಇನ್ಯಾವುದೇ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗಗೃಹಮಂಡಳಿಯ ಮನೆಗಳನ್ನು ಅವರಿಗೆ ಕೊಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ತ್ಯಾಜ್ಯ ಕುಸಿತ ಉಂಟಾದ ಮಂದಾರ ಪ್ರದೇಶದ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿ ಸ್ಥಳೀಯವಾಗಿ ಆಗಬೇಕಾದ ಎಲ್ಲ ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಮುಂದಿನ ಪ್ರಕ್ರಿಯೆಗಳು ನಡೆಯಬೇಕಾಗಿದೆ. ಸಿಂಧೂ ಬಿ.ರೂಪೇಶ್ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ‘ಮಂದಾರ’ ಈ ನಾಡಿಗೆ ಶ್ರೇಷ್ಠ ಸಾಹಿತಿಯನ್ನು ಪರಿಚಯಿಸಿದ ಮನೆ. ಅಂತಹ ಮನೆ ಇನ್ನು ನಮ್ಮ ಪಾಲಿಗೆ ಇಲ್ಲ ಅನ್ನುವುದನ್ನು ಅರಗಿಸಿಕೊಳ್ಳಲೂ ಆಗುತ್ತಿಲ್ಲ. ಈ ಪಾರಂಪರಿಕ ಮನೆ ನಮ್ಮ ಆಸ್ತಿಗಿಂತಲೂ ನಾಡಿನ ಆಸ್ತಿಯಾಗಿತ್ತು. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರಾಜೇಶ್ ಭಟ್, ಮಂದಾರ ದಿ.ಕೇಶವ ಭಟ್ ಸಂಬಂಧಿ.