

ಮಂಡ್ಯ: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲಜ್ಞಾನ ಹೆಚ್ಚಿಸಿಕೊಳ್ಳಬೇಕಿದೆ ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.
ನಗರದ ತಾವರೆಗೆರೆಯ ಎಸ್.ಬಿ ಸಮುದಾಯ ಭವನದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಮಾಂಡವ್ಯ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ಎಲ್ಲ ವಿಭಾಗದಲ್ಲಿಯೂ ಸ್ಪರ್ಧೆ ಇದೆ. ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಕಾಲೇಜು ಜೀವನ ವಿದ್ಯಾರ್ಥಿ ಬದುಕಿನ ತಿರುವು ನೀಡುವ ದಿನಗಳಾಗಿವೆ. ಆದ್ದರಿಂದ ಪಾಲಕರು, ಗುರುಗಳ ಮಾರ್ಗದರ್ಶನದೊಂದಿಗೆ ಸಾಧನೆ ಮಾಡಿ ಎಂದರು.
ಡಿಡಿಪಿಯು ಎಸ್.ಉಮೇಶ್ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಕಷ್ಟಕರ. ಇಂತಹ ಕಾಲಘಟ್ಟದಲ್ಲಿ ಮಾಂಡವ್ಯ ಶಿಕ್ಷಣ ಸಂಸ್ಥೆ ಉತ್ತಮವಾಗಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲಿ. ವಿದ್ಯಾರ್ಥಿಗಳು ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಓದಿ ಸಾಧನೆ ಮಾಡಿದರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ. ಶಿಕ್ಷಣ ಸಾಧನೆ ಮಾಡುವ ಹೆದ್ದಾರಿಯಾಗಿದೆ ಎಂದು ಕಿವಿಮಾತೇಳಿದರು.
ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಅಧ್ಯಯನದಿಂದ ಎಲ್ಲವನ್ನು ಸಾಧಿಸಬಹುದು. ಕಾಲೇಜಿನಲ್ಲಿ ಹೇಳಿಕೊಡುವ ಪಾಠ, ಪ್ರವಚನಗಳನ್ನು ಶ್ರದ್ದೆಯಿಂದ ಕಲಿತು ಉತ್ತಮ ಸಾಧನೆಯ ಅಂಕ ಪಡೆದು ಸಂಸ್ಕಾರ ಬೆಳೆಸಿಕೊಂಡರೆ ಸಾಕು. ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗುವುದು ಹೆಚ್ಚಾಗುತ್ತಿದೆ. ಇದನ್ನು ಬದಲಿಸಿಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಹೃದ್ರೋಗತಜ್ಞೆ ಡಾ.ಎಸ್.ಹೇಮಾ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್, ಐಟಿಐ ಆಡಳಿತಾಧಿಕಾರಿ ತನ್ಮಯ್, ಶೈಕ್ಷಣಿಕ ಪಾಲುದಾರ ಚನ್ನೇಶ್, ಅರ್ಚನಾ ಇತರರಿದ್ದರು.