ಪಾಲಕರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಕಿವಿಮಾತು

Mandavya Higher Primary School Anniversary Mandya
Published on

ಮಂಡ್ಯ: ಪಾಲಕರು ಮಕ್ಕಳಿಗಾಗಿ ಹಣ, ಆಸ್ತಿ ಮಾಡುವ ಬದಲು ಅವರಿಗೆ ಉತ್ತಮವಾದ ಶಿಕ್ಷಣ ನೀಡಿದರೆ, ಅವರೇ ಸಮಾಜಕ್ಕೆ ದೊಡ್ಡ ಆಸ್ತಿಯಾಗುತ್ತಾರೆಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ತಿಳಿಸಿದರು.

ಇಲ್ಲಿನ ವಿ.ವಿ. ನಗರದ ನಾಗಸಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆ(ಆಂಗ್ಲ ಮಾಧ್ಯಮ)ಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಕಳೆದ 40 ವರ್ಷದ ಹಿಂದೆ ಮಾಂಡವ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಹೆಗ್ಗಳಿಕೆ ಮೀರಾ ಶಿವಲಿಂಗಯ್ಯ ಅವರದಾಗಿದೆ. ಶಿಕ್ಷಣವನ್ನು ವಾಣಿಜ್ಯ ಚಟುವಟಿಕೆಯನ್ನಾಗಿ ನೋಡದೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವಿದ್ಯಾಸಂಸ್ಥೆಯಲ್ಲಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವುದು ಅವರ ಹೃದಯ ವೈಶಾಲತೆಗೆ ಸಾಕ್ಷಿಯಾಗಿದೆ ಎಂದರು.

ಎಸ್.ಬಿ. ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ವಾರ್ಷಿಕೋತ್ಸವವು ಹಬ್ಬದ ರೀತಿ ನಡೆಯುತ್ತದೆ. ಶಿಕ್ಷಣವೆಂದರೆ ಮಕ್ಕಳನ್ನು ಮಾನವಂತರಾಗಿಸುವುದು, ಘನತೆಯಿಂದ ಬದುಕುವುದಾಗಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಟಿ.ರವಿ, ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಗೀತಾಂಜಲಿ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಎಚ್.ಸರೋಜಾ, ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಸ್.ಸುನೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net