ಕಡ್ಡಾಯ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಲಿ

teachers association
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರ ತಕ್ಷಣ ಕಡ್ಡಾಯ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಪ್ಪಗೌಡ ಆರ್.ಕೆ. ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 10 ವರ್ಷಕ್ಕೂ ಹೆಚ್ಚು ಕಾಲ ನಗರ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ಹಾಗೂ ಸತತ 10 ವರ್ಷಕ್ಕೂ ಹೆಚ್ಚು ಕಾಲ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಈ ಬಾರಿ ಕೈ ಬಿಡಲಾಗಿದೆ. ಕೇವಲ ಸಾಮಾನ್ಯ ವರ್ಗಾವಣೆ ಮಾಡಲು ಹೊರಟಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ನಾವು ವಿರೋಧಿಸುತ್ತೇವೆ ಎಂದರು.

ನಗರ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಲಾಬಿಗೆ ಶಿಕ್ಷಣ ಇಲಾಖೆ ಮಣಿದಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮನೆ ಬಾಡಿಗೆ ಭತ್ಯೆ ಕಡಿಮೆ ಹಾಗೂ ಗ್ರಾಮೀಣ ಪರಿಹಾರ ಭತ್ಯೆ ಕೂಡ ಇಲ್ಲ. ಹೀಗಾಗಿ ನಗರದ ಪ್ರದೇಶದ ಶಿಕ್ಷಕರು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಹಾಲೇಶ ನವಲೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಪರಿಹಾರ ಭತ್ಯೆ ಇಲ್ಲ. ಈ ಬಗ್ಗೆ ನಿರಂತರವಾಗಿ ಹಕ್ಕೊತ್ತಾಯ ಮಾಡಿದರೂ ಸರ್ಕಾರ ನಮ್ಮ ಕಡೆ ತಿರುಗಿಯೂ ನೋಡಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದೆ ಗ್ರಾಮೀಣ ಪ್ರದೇಶದ ಶಿಕ್ಷಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. 7ನೇ ವೇತನ ಆಯೋಗದ ವರದಿಯನ್ನು ಸ್ವೀಕಾರ ಮಾಡಿರುವ ರಾಜ್ಯ ಸರ್ಕಾರ ಅದರ ಶಿಫಾರಸ್ಸುಗಳನ್ನು ಅಧ್ಯಯನ ಮಾಡಿ ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೋವಿಂದ ಜುಜಾರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net