

ದೇವದುರ್ಗ: ಬಿತ್ತನೆ ಬೀಜ, ಕ್ರಿಮಿನಾಶಕ, ರಸಗೊಬ್ಬರ ಸೇರಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿದ ನಂತರ ರೈತರಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ಸೂಚಿಸಿದರು.
ಪಟ್ಟಣದ ವಿವಿಧ ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ಅಧಿಕೃತ ಕ್ರಿಮಿನಾಶಕಗಳನ್ನು ಮಾರಾಟ ಮಾಡಬೇಕು.
ಯಾವುದೇ ವಸ್ತು ಖರೀದಿಸಿದರೂ ಅಧಿಕೃತ ರಸೀದಿ ನೀಡಬೇಕು. ನಕಲಿ ಬಿಲ್, ವಸ್ತುಗಳ ನೀಡುವುದು ಕಾನೂನು ಪ್ರಕಾರ ಅಪರಾಧ. ರೈತರ ಹಿತ ಕಾಪಾಡಲು ಮಾಲೀಕರು ಮುಂದಾಗಬೇಕು. ಪ್ರತಿಯೊಂದು ದಾಖಲೆ ಮೂರು ತಿಂಗಳವರೆಗೆ ಶೇಖರಿಸಿ ಇರಿಸಬೇಕು. ಅನಧಿಕೃತ ದಾಸ್ತಾನು ಸಂಗ್ರಹ, ಕಳಪೆ ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟ ಮಾಡುವುದು ಕಂಡುಬಂದರೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಮಹಾಲಕ್ಷ್ಮೀ ಆಗ್ರೋ ಏಜೆನ್ಸಿ, ಬಸವ ಟ್ರೇಡರ್ಸ್ ಸೇರಿ ವಿವಿಧ ಫರ್ಟಿಲೈಸರ್ ಅಂಗಡಿಗಳಿಗೆ ಭೇಟಿನೀಡಿ ದಾಖಲೆ ಪರಿಶೀಲಿಸಿದರು. ಕೃಷಿ ಅಧಿಕಾರಿಗಳಾದ ಅರ್ಚನಾ, ಶ್ರೀನಿವಾಸ್ ಇದ್ದರು.