ಕಡ್ಡಾಯವಾಗಿ ಜಾನುವಾರು ವಿಮೆಗೊಳಪಡಿಸಿ

9HNL2 VITARANE
Published on

ಹಾನಗಲ್ಲ: ಹೈನುಗಾರಿಕೆ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನ 75 ಸಹಕಾರ ಸಂಘಗಳ ಮೂಲಕ, ಪಶು ಸಂಗೋಪನಾ ಇಲಾಖೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2 ಎಚ್​ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರ, ಕೊಟ್ಟಿಗೆಯ ರಬ್ಬರ್ ಮ್ಯಾಟ್​ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ 50 ಫಲಾನುಭವಿಗಳಿಗೆ ಶೇ. 50ರ ಸಹಾಯಧನದ 33 ಸಾವಿರ ಮೌಲ್ಯದ ಮೇವು ಕತ್ತರಿಸುವ ಯಂತ್ರ ಹಾಗೂ 5600 ರೂ. ಮೌಲ್ಯದ ತಲಾ ಎರಡು ರಬ್ಬರ್ ಮ್ಯಾಟ್​ಗಳನ್ನು ವಿತರಿಸಿದರು.

ಬಳಿಕ ಮಾತನಾಡಿ ಶಾಸಕ ಶ್ರೀನಿವಾಸ ಮಾನೆ, ರಾಜ್ಯ ಸರ್ಕಾರದ ಮೂಲಕ ಜಾನುವಾರುಗಳ ವಿಮೆ ಸೌಲಭ್ಯ ಕಲ್ಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದು ಕಡ್ಡಾಯವಾಗಿ ಜಾನುವಾರುಗಳನ್ನು ವಿಮೆಗೊಳಪಡಿಸಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ ಮಾತನಾಡಿ, ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಕೊಟ್ಟಿಗೆಗಳಲ್ಲಿ ರಬ್ಬರ್ ಮ್ಯಾಟ್​ಗಳನ್ನು ಬಳಸಬೇಕು. ಇದರಿಂದ ಜಾನುವಾರುಗಳ ಮಂಡಿ ನೋವು, ಕೆಚ್ಚಲುಬಾವು ಮುಂತಾದ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಗೋವಿನಜೋಳ ಹಾಗೂ ಜೋಳದ ದಂಟುಗಳನ್ನು ಮೇವು ಕತ್ತರಿಸುವ ಯಂತ್ರಗಳಲ್ಲಿ ಕತ್ತರಿಸಿ ಜಾನುವಾರುಗಳಿಗೆ ನೀಡುವುದರಿಂದ ಮೇವು ಪೋಲಾಗದಂತೆ ಕಾಯ್ದುಕೊಳ್ಳಬಹುದಾಗಿದೆ. ದಂಟುಗಳ ಬಳಕೆಯಿಂದ ಜಾನುವಾರುಗಳಲ್ಲಿ ಹೈನು ಸಾಮರ್ಥ್ಯವೂ ಹೆಚ್ಚುತ್ತದೆ. ಗಂಟೆಗೆ 300 ರಿಂದ 350 ಕೆಜಿ ಮೇವು ಕತ್ತರಿಸಬಹುದಾಗಿದೆ ಎಂದರು. ತಾಲೂಕಿನಲ್ಲಿ ಈ ಯಂತ್ರಗಳಿಗೆ ರೈತರಿಂದ ಬಹು ಬೇಡಿಕೆ ವ್ಯಕ್ತವಾಗುತ್ತಿದ್ದು, ಸದ್ಯ 50 ಯಂತ್ರಗಳು ಲಭ್ಯವಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಯಂತ್ರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

ತಹಸೀಲ್ದಾರ್ ರವಿಕುಮಾರ ಕೊರವರ, ಪಶು ವೈದ್ಯರಾದ ಡಾ.ಮಂಜುನಾಥ ಗಂಗಿಮಾಳಮ್ಮನವರ, ಸಿಬ್ಬಂದಿ ಬಿ.ಬಿ. ಭಾವಿಕಟ್ಟಿ, ಸಿ.ಎ.ಪಾಟೀಲ, ಭೀಮಪ್ಪ ಲಮಾಣಿ, ಸಿದ್ದಪ್ಪ ಹಂಚಿನಮನಿ, ಅನೂಪ ಸಿದ್ದುನವರ, ಶಿವಾಜಿ ಬಡಿಗೇರ, ಮಲ್ಲಿಕಾರ್ಜುನ ಶಿರಮಾಪುರ, ಗಣೇಶ ಕರಾಟೆ, ಸುನೀಲ ಲಕ್ಕಪ್ಪನವರ, ನಾಗೇಶ ಬಣಕಾರ, ಸಂಜೀವ ರಾಯಚೂರ, ರೈತರಾದ ಲಕ್ಷ್ಮಣಪ್ಪ ಕುರುಬರ, ರಘುನಾಥ ಗಾಯಕವಾಡ, ಸಹದೇವ ನಾರ್ವೆಕರ, ಮಮ್ಹದ್​ರಫೀಕ್ ಉಪ್ಪುಣಸಿ, ಮಂಜಪ್ಪ ಕುರುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net