

ಕೊಕ್ಕರ್ಣೆ: ನೂರನಲವತ್ತೈದು ದಿನಗಳು ನಡೆದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ ಮೇಳದ ಮಳೆಗಾಲದ ಆಟ ಗುರುವಾರ ಕೊನೆಯ ಸೇವೆ ಆಟದೊಂದಿಗೆ ಮುಕ್ತಾಯಗೊಂಡಿದ್ದು, ನ.17ರಿಂದ ಐದು ಮೇಳಗಳ 2024-25ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.
ಎರಡು ಚೌಕಿ ಮತ್ತು ಕಲ್ಯಾಣ ಮಂದಿರದ ಒಂದೇ ವೇದಿಕೆಯಲ್ಲಿ ಎರಡು ರಂಗಸ್ಥಳಗಳಲ್ಲಿ ಗಣಪತಿ ಪೂಜೆ ಮತ್ತು ಒಡ್ಡೋಲಗದ ತನಕ ಎರಡೂ ರಂಗಸ್ಥಳಗಳಲ್ಲಿ ಸೇವೆಯಾಗಿ ನಂತರ ಮೇಳಗಳ ಕಲಾವಿದರ ಕೂಡುವಿಕೆಯಲ್ಲಿ ಸೇವೆಯಾಟ ನಡೆಯಿತು. ಜೂನ್ 18ರಿಂದ ಮಳೆಗಾಲದ ಸೇವೆಯಾಟ ಆರಂಭಗೊಂಡಿದ್ದು, ಇದು ಸತತ 8ನೇ ವರ್ಷಕ್ಕೆ ಕಾಲಿಟ್ಟಿದೆ. ಮಂದಾರ್ತಿ ದೇವಳದ ರಥಬೀದಿಯಲ್ಲಿ ದಿನಕ್ಕೆ ಎರಡರಂತೆ 145 ದಿನಗಳಲ್ಲಿ 290 ಸೇವೆ ಆಟಗಳು ನಡೆದಿವೆ. ಪ್ರಸ್ತುತ ಐದು ಮೇಳಗಳು ಮುಂದಿನ ಸಾಲಿನ ತಿರುಗಾಟಕ್ಕೆ ಸಿದ್ಧತೆ ಮಾಡಿಕೊಂಡಿವೆ.
ಕಲಾವಿದರ ಸಹಕಾರ, ಸೇವಾರ್ಥಿಗಳ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹದಿಂದ ಈ ಬಾರಿ ಮಳೆಗಾಲದ ಆಟ ಸುಸೂತ್ರವಾಗಿ ಸಂಪನ್ನಗೊಂಡಿದೆ. ಮುಂದಿನ ಸಾಲಿನ ತಿರುಗಾಟಕ್ಕೆ ಸೂಕ್ತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. -ಎಚ್.ಧನಂಜಯ ಶೆಟ್ಟಿ, ದೇವಳ ಆನುವಂಶಿಕ ಮೊಕ್ತೇಸರ