ಜನ್ಮಾಷ್ಟಮಿಗೆ ಆಗಸ್ಟ್​ 1ರಿಂದ ಮಂಡಲೋತ್ಸವದ ಸಡಗರ...

Mandalothsava 1
Published on

ಪರ್ಯಾಯ ಸುಗುಣೇಂದ್ರ ಶ್ರೀ ಮಾಹಿತಿ

ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪುತ್ತಿಗೆ ಮಠದ ಪರ್ಯಾಯ ಅವಧಿಯ ಮುಕ್ಕಾಲು ಭಾಗ ಮುಗಿದೆ. ಇನ್ನು ಕಾಲು ಭಾಗ ಆರು ತಿಂಗಳು ಮಾತ್ರ ಉಳಿದಿದೆ. ಹೀಗಾಗಿ ಈ ಪರ್ಯಾಯದಲ್ಲಿ ಕೃಷ್ಣ ಮತ್ತು ಗೀತೆಯನ್ನು ಪ್ರಧಾನ ಎರಡು ತತ್ತ್ವವಾಗಿ ಆಚರಿಸುತ್ತಿದ್ದೇವೆ. ತನ್ನಿಮಿತ್ತ ಕೃಷ್ಣನ ಉತ್ಸವ ಹಾಗೂ ಗೀತಾ ಉತ್ಸವವನ್ನು ಶಿಖರಪ್ರಾಯವಾಗಿ ವೈಭವದಿಂದ ಆಚರಿಸಿಲು ಆಗಸ್ಟ್​ 1ರಿಂದ 48 ದಿನಗಳ ಕಾಲ ಮಂಡಲೋತ್ಸವ ಆಯೋಜಿಸಲಾಗುತ್ತಿದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ಮಾಹಿತಿ ನೀಡಿದರು.

ಉಡುಪಿ ಪುತ್ತಿಗೆ ಮಠದಲ್ಲಿ ಉತ್ಸವದ ಹಿನ್ನೆಲೆಯಲ್ಲಿ ಜುಲೈ 12ರಂದು ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯಗೆ ಆಹ್ವಾನ

ನಮ್ಮ 4ನೇ ಪರ್ಯಾಯವನ್ನು ವಿಶಿಷ್ಟವಾಗಿ ಶ್ರೀಕೃಷ್ಣನಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ. ಕೃಷನ ಜನ್ಮಾಷ್ಟಮಿಯ ನಿಮಿತ್ತದ 48 ದಿನಗಳ ಮಂಡಲೋತ್ಸವ ಆಚರಿಸಲಾಗುವುದು. ಅದನ್ನು ಐತಿಹಾಸಿಕವಾಗಿ ದಾಖಲಿಸಲು ಯಾವುದೇ ಜಾತಿ&ಮತ, ಭೇದವಿಲ್ಲದೆ ಎಲ್ಲ ಭಕ್ತರೂ ತನು, ಮನ ಹಾಗೂ ಧನದ ಸಹಕಾರವನ್ನೂ ನೀಡುವಂತಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದು, ಸಮ್ಮತಿ ನೀಡಿದ್ದಾರೆ. ದೇವರ ಅನುಗ್ರಹಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕಾರ್ಯ ಮಾಡೋಣ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

ಯಶ್​ಪಾಲ್​ ಸುವರ್ಣ ಗೌರವಾಧ್ಯಕ್ಷತೆಯಲ್ಲಿ ಮಂಡಲೋತ್ಸವದ ಸಮಿತಿ ರಚಿಸಲಾಯಿತು. ವಿವಿಧ ಸಂಘ-ಸಂಸ್ಥೆ, ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರಿನ ಗಣ್ಯರು ಸಲಹೆ-ಸೂಚನೆ ನೀಡಿದರು. ಕಾರ್ಯಕ್ರಮಗಳ ಸ್ವರೂಪ, ರೂಪು-ರೇಷೆ ಕುರಿತು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದರು.

ಸಭೆಯಲ್ಲಿ ನಗರಸಭಾ ಸದಸ್ಯ ಕೃಷ್ಣ ರಾವ್​ ಕೊಡಂಚ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಜಯರಾಮ ಆಚಾರ್ಯ, ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಯು.ಬಿ. ಇತರರಿದ್ದರು. ಮಠದ ರಮೇಶ ಭಟ್​ ಸ್ವಾಗತಿಸಿದರು. ರವೀಂದ್ರ ಆಚಾರ್ಯ ವಂದಿಸಿದರು.

50 ಲಕ್ಷ ರೂ. ಅನುದಾನ ಮೀಸಲು

Mandalothsava 2
ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಪುತ್ತಿಗೆ ಮಠದ ಪರ್ಯಾಯವೆಂದರೆ ಅದು ವಿಶೇಷ ಕಲ್ಪನೆಯಿಂದ ಕೂಡಿರುತ್ತದೆ. ಸುಗುಣೇಂದ್ರ ಶ್ರೀಗಳ ಧಾರ್ಮಿಕ ಜಾಗೃತಿ ಕಾರ್ಯಕ್ರಮ ದೇಶಕ್ಕಷ್ಟೇ ಅಲ್ಲ, ವಿಶ್ವಕ್ಕೆ ಮಾದರಿಯಾಗಿದೆ. ಮೈಸೂರು ದಸರಾ, ಮಂಗಳೂರು ದಸರಾ ಮಾದರಿಯಲ್ಲಿಯೇ ಉಡುಪಿಯ ಪರ್ಯಾಯವನ್ನೂ ವೈಭವದಿಂದ ಆಚರಿಸಲು ನಿರ್ಧರಿಸಿದ್ದೇವೆ. ಪ್ರತಿ ಪರ್ಯಾಯದ ಸಂದರ್ಭದಲ್ಲೂ ನಗರವನ್ನು ವಿದ್ಯುತ್​ ದೀಪಾಲಂಕಾರ ಮಾಡಲು ಉಡುಪಿ ನಗರಸಭೆಯಿಂದ 50 ಲಕ್ಷ ರೂ. ಅನುದಾನ ಮೀಸಲಿಡಲು ನಿರ್ಧರಿಸಿದ್ದೇವೆ. ಎಂಜಿಎಂನಿಂದ ಬನ್ನಂಜೆವರೆಗೆ, ಕಿನ್ನಿಮುಲ್ಕಿ ದ್ವಾರದಿಂದ ಕನಕದಾಸ ರಸ್ತೆ ಮಾರ್ಗವಾಗಿ ಸಂಸ್ಕೃತ ಕಾಲೇಜಿನವರೆಗೆ, ಪಿಪಿಸಿ ಆಡಿಟೋರಿಯಂನಿಂದ ಕಲ್ಸಂಕ ಸರ್ಕಲ್​ವರೆಗೆ ದೀಪಾಲಂಕಾರ ಮಾಡಲಾಗುವುದು ಎಂದರು.

ಆಗಸ್ಟ್​ 30ರಂದು ಕೇಂದ್ರ ಸರ್ಕಾರವು ಶ್ರಿ ಮಧ್ವಾಚಾರ್ಯರ ಸ್ಟ್ಯಾಂಪ್​ ಬಿಡುಗಡೆಗೆ ನಿರ್ಧರಿಸಿದ್ದು, ಅದು ಉಡುಪಿಯಲ್ಲಿ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಆಗಬೇಕೆಂದು ತಿಳಿಸಿದ್ದಾರೆ. ಈ ಕಾರ್ಯಕ್ರಮವೂ ಸೇರಿದಂತೆ ಮಠದ ಎಲ್ಲ ಕಾರ್ಯಕ್ರಮಕ್ಕೂ ಭಕ್ತರು ಪಾಲ್ಗೊಳ್ಳಬೇಕು, ಸಹಕರಿಸಬೇಕು. | ನಾಗರಾಜ ಆಚಾರ್ಯ. ಪುತ್ತಿಗೆ ಮಠದ ದಿವಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net