

ಮಂಡ್ಯ: ತಾಲೂಕಿನ ಸಮೀಪದ ಗಂಟಗೌಡನಹಳ್ಳಿ ಗ್ರಾಮದ ಗೇಟ್‌ನ ಮಂಡ್ಯ-ನಾಗಮಂಗಲ ಮುಖ್ಯರಸ್ತೆಯ ಪಕ್ಕದ ಪುರಾಣ ಪ್ರಸಿದ್ಧ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಡಲ ಉತ್ಸವ ಯಶಸ್ವಿಯಾಗಿ ನಡೆಯಿತು.
ಹಳೆಯದಾಗಿದ್ದ ದೇವಸ್ಥಾನವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲಾಗಿತ್ತು. ಅದರಂತೆ ನೂತನ ವಿಗ್ರಹ ಪ್ರತಿಷ್ಠಾಪಿಸಿ ಲೋರ್ಕಾಪಣೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಈ ಹಿನ್ನೆಲೆಯಲ್ಲಿ 48 ದಿನ ವಿಶೇಷ ಪೂಜೆ ಮಾಡಿಕೊಂಡು ಬರಲಾಗಿತ್ತು. ಸೋಮವಾರ ಮಂಡಲ ಉತ್ಸವ ಆಯೋಜಿಸಲಾಗಿತ್ತು.
ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿವಿಧ ಹೋಮ ಹವನಾದಿಗಳು ನೆರವೇರಿದವು. ಗಣಪತಿ ಪೂಜೆ, ಸುವರ್ಣ ವಾಸ್ತು ಪೂಜೆ, ನಾಂದಿ ಪೂಜೆ, ನವಗ್ರಹ ಸಪ್ತಮಾತೃಕೆ ಮಹಾಮೃತ್ಯುಂಜಯ ಪ್ರಧಾನ, ಪವಮಾನ ಕಳಸ ಪೂಜೆ ಹಾಗೂ ವೀರಾಂಜನೇಯಸ್ವಾಮಿಗೆ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ ವಾಸ್ತು ಹೋಮ, ವರುಣ ವಾಸ್ತು ಹೋಮ, ನಾಂದಿ ಹೋಮ ಸೇರಿದಂತೆ ಧಾರ್ಮಿಕ ಕೈಂಕರ್ಯ ನಡೆಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ವೀರಾಂಜನೇಯ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿತು. ಸುದೀಪ್ ಆರಾಧ್ಯರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಅರ್ಚಕ ರಾಮಚಂದ್ರು ಅವರು ಹೋಮ ಸೇರಿದಂತೆ ಧಾರ್ಮಿಕ ಪೂಜೆ ನಡೆಸಿದರು.
ಇನ್ನು 48 ದಿನಗಳಿಂದ ಅಕ್ಕಪಕ್ಕದ ಗ್ರಾಮದ ಭಕ್ತರ ನೆರವಿನಿಂದ ಪ್ರತಿ ಸಂಜೆ ಏಳು ಗಂಟೆಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನದಾಸೋಹ ನಡೆಯುತ್ತಿತ್ತು. ಮಂಡಲ ಪೂಜೆಯ ದಿನವಾದ ಸೋಮವಾರ 5000ಕ್ಕೂ ಹೆಚ್ಚು ಭಕ್ತರಿಗೆ ಅವರೇಕಾಳು ಸಾರು, ಮುದ್ದೆ, ಅನ್ನ, ಮಜ್ಜಿಗೆ, ಬೂಂದಿ ಪಾಯಸವನ್ನು ಪ್ರಸಾದವಾಗಿ ನೀಡಲಾಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಗೌಡನಹಳ್ಳಿ, ಉಪ್ಪರಕನಹಳ್ಳಿ, ಗುಡಿಗೇನಹಳ್ಳಿ, ಬಸರಾಳು, ದೊಡ್ಡ ಗರುಡನಹಳ್ಳಿ, ಹಂಪಾಪುರ, ಬಿಳಿದೇಗಲು, ಹೊಡಾಘಟ್ಟ, ಬೇಬಿ, ಕೆಬ್ಬಳ್ಳಿ, ದ್ಯಾಪಸಂದ್ರ, ಹನುಗನಹಳ್ಳಿ, ಹೊಸೂರು, ಮಲ್ಲಘಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಪಾಲ್ಗೊಂಡರು. ರಾತ್ರಿ 7 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭಕ್ತರು ಸಾವಿರಾರು ದೀಪಗಳನ್ನು ಹಚ್ಚಿ ದೇವರಿಗೆ ಪ್ರಾರ್ಥಿಸಿದರು.