ಮಾ.10ರಂದು ನಗರದ ಲೇಬರ್ ಕಾಲನಿಯಲ್ಲಿ ಮಂಡಲ ಪೂಜೆ: 25ನೇ ವಾರ್ಡ್ ಸದಸ್ಯ ನಾಗೇಶ್ ಮಾಹಿತಿ

Mandal Puja in Labor Colony mandya
Published on

ಮಂಡ್ಯ: ಇಲ್ಲಿನ ನೆಹರುನಗರದ ಲೇಬರ್ ಕಾಲನಿಯಲ್ಲಿ ಜ.22ರಂದು ಲೋಕಾರ್ಪಣೆಗೊಂಡ ಶ್ರೀರಾಮಮಂದಿರದಲ್ಲಿ ಕಳೆದ 48 ದಿನಗಳಿಂದ ನಡೆಯುತ್ತಿದ್ದ ಮಂಡಲ ಪೂಜೆಯ ಕಡೆಯ ದಿನದ ಪೂಜಾ ಮಹೋತ್ಸವ ಮಾ.10ರಂದು ನಡೆಯಲಿದೆ ಎಂದು ನಗರಸಭೆ 25ನೇ ವಾರ್ಡ್ ಸದಸ್ಯ ನಾಗೇಶ್ ತಿಳಿಸಿದರು.

70 ವರ್ಷದ ಹಿಂದೆ ಕಾಲನಿಯಲ್ಲಿ ನಿರ್ಮಾಣವಾಗಿದ್ದ ರಾಮಮಂದಿರವು ಶಿಥಿಲವಾಗಿತ್ತು. ಈ ಹಿನ್ನೆಲೆಯಲ್ಲಿ 14 ವರ್ಷದ ಹಿಂದೆ ಅದನ್ನು ಕೆಡವಿ ಹೊಸ ದೇಗುಲ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿ 14 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನವೇ ಲೋಕಾರ್ಪಣೆಗೊಂಡಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶೇಷವೆಂದರೆ ಅಯೋಧ್ಯೆಯ ರಾಮಮಂದಿರದ ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ಕೆತ್ತನೆಯಾಗಿರುವ ಸೀತೆ, ಲಕ್ಷ್ಮಣ, ಆಂಜನೇಯ ಸಮೇತ ಶ್ರೀರಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹೀಗಾಗಿ ನಮ್ಮ ರಾಮಮಂದಿರ ಕೂಡ ದೇಶಾದ್ಯಂತ ಗಮನ ಸೆಳೆದಿತ್ತು. ದೇವಸ್ಥಾನದಲ್ಲಿ 48 ದಿನದ ಮಂಡಲ ಪೂಜೆ ಆಯೋಜಿಸಲಾಗಿದೆ. 10ರಂದು ಮಂಡಲ ಪೂಜಾ ಮಹೋತ್ಸವ, ಹೋಮ-ಹವನ, ಪೂರ್ಣಾಹುತಿ ನಡೆಯಲಿದೆ. ಇದೇ ವೇಳೆ 5 ಸಾವಿರ ಜನರಿಗೆ ಅನ್ನದಾಸೋಹ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಕಾಲನಿ ಮುಖಂಡರಾದ ತಿಮ್ಮಯ್ಯ, ಮಹದೇವು, ಮುತ್ತುರಾಜು, ಮಹದೇವ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net