ಪೂರ್ವ ದ್ವೇಷವನ್ನಿಟ್ಟುಕೊಂಡು ಶಾಲೆಯಲ್ಲಿ ಅಶಾಂತಿ ಸೃಷ್ಠಿಸುವ ಯತ್ನ!

Published on

ವಿಟ್ಲ: ಬಂಟ್ವಾಳ ತಾಲೂಕು ಮಂಚಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿದ ವಿಚಾರ ಹಾಗೂ ಶಿಕ್ಷಕಿ ಕ್ಷಮೆಯನ್ನು ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿದ್ದರು. ಶಿಕ್ಷಕಿಯೊಬ್ಬರ ಘೋಷಣೆಯಂತೆ ವೀರ ಸಾವರ್ಕರ್ ಅವರಿಗೂ ಜೈಕಾರವನ್ನು ಹಾಕಲಾಗಿತ್ತು. ಸ್ಥಳಿಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ವಿಚಾರದಲ್ಲಿ ಶಿಕ್ಷಕಿ ವಿಟ್ಲ ಠಾಣೆಗೆ ದೂರು ನೀಡಿದ್ದರು.

ಗುರುವಾರ ಆ.17ರಂದು ಈ ಕುರಿತು ಶಾಲೆಯಲ್ಲಿ ಚರ್ಚಿಸಲು ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೆಲ ಪೋಷಕರು ಹಾಗೂ ರಾಜಕೀಯ ಮುಖಂಡರು ಶಿಕ್ಷಕಿಗೆ ತರಾಟೆಗೆತ್ತಿಕೊಂಡಿದ್ದರು. ಕೆಲ ಪೋಷಕರು ಶಿಕ್ಷಕಿ ಪರವು ಧ್ವನಿ ಎತ್ತಿದ್ದರು ಎನ್ನಲಾಗಿದೆ. ಇದರಿಂದ ಸಭೆಯಲ್ಲಿ ಗದ್ದಲ ಏರ್ಪಟ್ಟಿದೆ. ಕೊನೆಗೆ ಮನ ನೊಂದ ಶಾಲಾ ಮುಖ್ಯಶಿಕ್ಷಕಿ ಪೋಷಕರ ಬಳಿ ಕ್ಷಮೆ ಯಾಚಿಸಿದ್ದರು.

ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಶಾಲೆಗೆ ಬಂಟ್ವಾಳ ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ವಿಡಿಯೋ ಮಾಡಿದ ವ್ಯಕ್ತಿ ಕ್ಷಮೆಯನ್ನು ಯಾಚಿಸಿದ ಹಿನ್ನಲೆಯಲ್ಲಿ ಪ್ರಕರಣ ಸುಖಾಂತ್ಯವಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net