ನ.8ರಂದು ಮಂಚಮ್ಮದೇವಿ ದೇವಸ್ಥಾನ ಲೋಕಾರ್ಪಣೆ: ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ ಮಾಹಿತಿ

Manchamma Temple Trust Press Conference Mandya
Published on

ಮಂಡ್ಯ: ನಗರದ ಕಲ್ಲಹಳ್ಳಿ ಹಾಗೂ ವಿ.ವಿ ನಗರ ನಿವಾಸಿಗಳ ಆರಾಧ್ಯದೇವತೆ ಮಂಚಮ್ಮ ದೇವಿಯ ನೂತನ ದೇವಾಲಯದ ಲೋಕಾರ್ಪಣೆ ಸಮಾರಂಭ ನ.7 ಮತ್ತು 8ರಂದು ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ ತಿಳಿಸಿದರು.

ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೇವಾಲಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಡೆ ಅವರು ಎರಡೂವರೆ ಲಕ್ಷ ರೂ.ಗಳ ಅನುದಾನ ನೀಡಿದ್ದಾರೆ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನೂತನ ದೇವಾಲಯ ನಿರ್ಮಾಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

7ರಂದು ಬೆಳಗ್ಗೆ 7.30ಕ್ಕೆ ಗ್ರಾಮದ ಕೊಡಮಕ್ಕಳು ಹಾಗೂ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಿ, ಮೀಸಲು ನೀರು ತಂದು ಗೋಪೂಜೆ ಹಾಗೂ ವೀರಭದ್ರ ಕುಣಿತ ಸಮೇತ ಮಂಗಳವಾದ್ಯದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. ಸಂಜೆ 6.30ಕ್ಕೆ ಸುತ್ತೂರು ಸಮೀಪದ ತುಮ್ಮನೇರಳೆ ಗ್ರಾಮದ ನಾಗಲಿಂಗೇಶ್ವರಸ್ವಾಮಿ, ಕಲ್ಲಹಳ್ಳಿ ಗ್ರಾಮದ ಮಾರಮ್ಮದೇವಿ ಹಾಗೂ ವಿ.ವಿ ನಗರದ ಆದಿಶಕ್ತಿ ಮಾರಮ್ಮ ದೇವರ ಹೂ-ಹೊಂಬಾಳೆ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ರಾತ್ರಿ 9 ಗಂಟೆಗೆ ದೇವಸ್ಥಾನದಲ್ಲಿ ಮಂಡಲ ದರ್ಶನ, ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಾಗಲಿದೆ ಎಂದು ವಿವರಿಸಿದರು.

8ರಂದು ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತದಲ್ಲಿ ಮಂಚಮ್ಮ ದೇವರ ಗದ್ದುಗೆಗೆ ಪ್ರಾಣ ಪತ್ರಿಷ್ಠೆ ಮತ್ತು ನ್ಯಾಸಗಳು, ಕಲಾಹೋಮ ನೆರವೇರಲಿದೆ. ಬೆಳಗ್ಗೆ 9.30ರಿಂದ ಮಠಾಧೀಶರಿಂದ ವಿವಿಧ ಧಾರ್ಮಿಕ ಕಾರ್ಯ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಆಚಾರ್ಯ ಎನ್.ಎಸ್.ನವೀನ್ ಧಾರ್ಮಿಕ ಕಾರ್ಯದ ಉಸ್ತುವಾರಿ ವಹಿಸಲಿದ್ದಾರೆ. ಪಾಂಡವಪುರದ ನಾಗಲಿಂಗೇಗೌಡ ಮತ್ತು ತಂಡದಿಂದ ಭಕ್ತ ನಮನ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ರಿಂದ ಅನ್ನದಾಸೋಹ ನೆರವೇರಲಿದೆ ಎಂದು ತಿಳಿಸಿದರು.

8ರಂದು ನಡೆಯಲಿರುವ ಧಾರ್ಮಿಕ ಕಾರ್ಯದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಧಾರ್ಮಿಕ ಸಭೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರವಿಕುಮಾರ್ ಗಣಿಗ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಭಾಗವಹಿಸಲಿದ್ದಾರೆ ಎಂದರು.

ವಿಶೇಷ ಆಹ್ವಾನಿತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ, ತುಮ್ಮನೇರಳೆ ಗ್ರಾಮದ ಮುಖಂಡ ಟಿ.ಎನ್.ಶರತ್, ಚಲನಚಿತ್ರ ನಟ ಪಾಲಹಳ್ಳಿ ಅರವಿಂದ್, ಮುಡಾ ನಿರ್ದೇಶಕ ಎಂ.ಕೃಷ್ಣ, ಉದ್ಯಮಿಗಳಾದ ರವಿ ಬೋಜೇಗೌಡ, ಕಾಳೇನಹಳ್ಳಿ ತಿಮ್ಮೇಗೌಡ, ಎಂ.ಎನ್. ಮಹದೇವು, ನಗರಸಭಾ ಸದಸ್ಯರಾದ ಟಿ.ರವಿ, ಎಂ.ಎಸ್.ಶಿವಲಿಂಗು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಕೆ.ರಾಮಲಿಂಗಯ್ಯ, ಖಜಾಂಚಿ ಕೆ.ಜಿ.ಮೋಹನ್‌ಕುಮಾರ್, ಕಾರ್ಯದರ್ಶಿ ಕೆ.ಸಿ.ರವೀಂದ್ರ, ಟ್ರಸ್ಟಿಗಳಾದ ಕೆ.ರಾಜು, ಕೆ.ಸಿ.ಧರ್ಮೇಂದ್ರ, ಕೆ.ನಾಗಲಿಂಗೇಗೌಡ, ಕಿರಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net