ದುರಸ್ತುಪಡಿಸಿ ಪೋಡಿ ಮಾಡಿ: ಎಂಎಲ್‌ಸಿ ದಿನೇಶ್ ಗೂಳಿಗೌಡ ಮನವಿ

01_11_Mdy_04(Mlc)
Published on
ಮಂಡ್ಯ: ಜಿಲ್ಲೆಯ ರೈತರ ಜಮೀನುಗಳನ್ನು ಅಳತೆ ಜತೆಗೆ ದುರಸ್ತುಪಡಿಸಿ ಹಾಗೂ ಪೋಡಿ ಮಾಡುವುದರ ಜತೆಗೆ ಕಾಲಮಿತಿಯಲ್ಲಿ ಖಾತೆ ಮಾಡಿಕೊಡಲು ಕ್ರಮ ವಹಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕಂದಾಯ ಸಚಿವ ಆರ್.ಅಶೋಕ್‌ಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಮಂಗಳವಾರ ಮನವಿ ಸಲ್ಲಿಸಿದ ಅವರು, ಜಿಲ್ಲಾದ್ಯಂತ ರೈತರು ತಮ್ಮ ಜಮೀನುಗಳನ್ನು ಅಳತೆ ಮಾಡಿ ದುರಸ್ತು ಪಡಿಸಿ ಪೋಡಿ ಮಾಡಿ ಖಾತೆ ಮಾಡಿಕೊಡುವಂತೆ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಗಳಲ್ಲಿ ಶುಲ್ಕ ಸಹಿತ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯ 12 ಸಾವಿರ ಅರ್ಜಿಗಳು ಬಾಕಿ ಉಳಿದಿರುತ್ತವೆ. ಇದರಿಂದ ರೈತರು ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ಜಮೀನುಗಳನ್ನು ಅಳತೆ ಮಾಡಿ ದುರಸ್ತುಪಡಿಸಿ ಅವರು ಜಮೀನುಗಳನ್ನು ಗುರುತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರೂ ಸಹ ಸುಮಾರು ಹಲವಾರು ತಿಂಗಳಿಂದ ಕೆಲಸವಾಗದೆ ಬಾಕಿ ಉಳಿದಿರುತ್ತವೆ. ಈ ಬಗ್ಗೆ ಜಿಲ್ಲಾಡಳಿತವನ್ನು ವಿಚಾರಿಸಿದಾಗ ಸರ್ವೇಯರ್‌ಗಳ ಕೊರತೆ ಇರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಸರ್ವೇಯರ್‌ಗಳನ್ನು ನಿಯೋಜಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಶ್ರೀಧರ್, ಅಮರಾವತಿ ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net