ರಸ್ತೆ ಸೌಲಭ್ಯ ಕಲ್ಪಿಸಲು ರೈತರ ಮನವಿ

KRP 2
Published on

ಕೆ.ಆರ್. ಪೇಟೆ : ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದಲ್ಲಿರುವ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ರಸ್ತೆಯಿಲ್ಲದೇ ತೀವ್ರ ತೊಂದರೆಯಾಗಿದ್ದು, ಕೂಡಲೇ ರಸ್ತೆ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್ ನಿಸರ್ಗಪ್ರಿಯ ಮತ್ತು ಶಾಸಕ ಎಚ್.ಟಿ. ಮಂಜು ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಪಾಲಿಟೆಕ್ನಿಕ್‌ಗೆ ಕಾಂಪೌಂಡ್ ನಿರ್ಮಿಸುವಾಗ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿಗೆ ಹೋಗಿ ಬರಲು ರೈತರಿಗೆ ತೀವ್ರ ತೊಂದರೆಯಾಗಿದೆ. ಭರವಸೆ: ಪಾಲಿಟೆಕ್ನಿಕ್ ಕಟ್ಟಡದ ವ್ಯಾಪ್ತಿಯ ಒಂದು ಭಾಗದಲ್ಲಿ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಲು ಸ್ಥಳ ಗುರುತಿಸಿಕೊಡಲು ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡುವೆ ಎಂದು ಶಾಸಕ ಮಂಜು ಭರವಸೆ ನೀಡಿದರು. ರಸ್ತೆ ಸಮಸ್ಯೆಯ ಗಂಭೀರತೆಯ ಅರಿವಾಗಿದೆ. ಆದಷ್ಟು ಬೇಕ ರಸ್ತೆ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ವಹಿಸುವೆ ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಹೇಳಿದರು. ರೈತ ಮುಖಂಡರಾದ ಕೆ.ಎಸ್. ಗೋಪಾಲ, ಪರಮೇಶ, ವಿಠಲಾಪುರ ಜಯರಾಮ್, ಜವರಪ್ಪ, ಯಜಮಾನ ನಾಗಣ್ಣ, ಹರೀಶ, ರಾಮಲಿಂಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net