ಉಸ್ತುವಾರಿ ಸಚಿವರಿಗೆ ರೈತ ಸಂಘ ಮನವಿ

02 HANUR 3
Published on

ಹನೂರು : ತಾಲೂಕಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ಹನೂರು ಸಮೀಪದ ಆರ್.ಎಸ್. ದೊಡ್ಡಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಕಾರನ್ನು ತಡೆದು ಮನವಿ ಸಲ್ಲಿಸಿದರು.
ಮ.ಬೆಟ್ಟದಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವರು ಗುರುವಾರ ಕೊಂಬುಡಿಕ್ಕಿ ಗ್ರಾಮದಲ್ಲಿ ಕುಂದು ಕೊರತೆ ಸಭೆಯನ್ನು ಆಯೋಜಿಸಿದ್ದರು. ಈ ಹಿನ್ನಲೆ ತಾಲೂಕು ರೈತ ಸಂಘದ ಪದಾಧಿಕಾರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಮನವಿ ಸಲ್ಲಿಸಲು ತೆರಳುತ್ತಿದ್ದರು. ಆದರೆ ಸಚಿವರು ಕೊಂಬುಡಿಕ್ಕಿಯಿಂದ ವಾಪಸ್ಸಾಗುವುದನ್ನು ತಿಳಿದ ರೈತರು ಆರ್.ಎಸ್ ದೊಡ್ಡಿ ಬಳಿ ಸಚಿವರ ಕಾರನ್ನು ತಡೆದು ಮನವಿ ಸಲ್ಲಿಸಿದರು.
ಈ ವೇಳೆ ಕೊಳ್ಳೇಗಾಲ ರೈತ ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ತಾಲೂಕು ರಚನೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ರೈತರು ಹಲವು ಸಮಸ್ಯೆಗಳ ನಡುವೆಯೂ ಕೃಷಿ ಮಾಡುತ್ತಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು. ಸಚಿವರು ಕೂಡಲೇ ಜಿಲ್ಲಾಧಿಕಾರಿಗೆ ಕರೆ ಮಾಡಿ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಆವರಣಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್‌ಖಾನ್, ಮುಖಂಡರಾದ ಪಳನಿಶೆಟ್ಟಿ, ಈರಣ್ಣ, ರಾಜಣ್ಣ, ಅರ್ಪದರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net