ಎಲ್ಲ ರೈಲುಗಳ ಸಂಚಾರ ಆರಂಭಿಸಿ ; ಸಂಸದರಿಗೆ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಮನವಿ

06Tmk_Railway_Vedike
Published on

ತುಮಕೂರು : ಕರೊನಾ ಗಣನೀಯವಾಗಿ ಇಳಿಮುಖವಾಗಿದ್ದು ಎಲ್ಲವೂ ಸಹಜಸ್ಥಿತಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ ಕರೊನಾ ಪೂರ್ವದಲ್ಲಿ ಸಂಚರಿಸುತ್ತಿದ್ದ ಎಲ್ಲ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಿಸುವಂತೆ ಸಂಸದ ಜಿ.ಎಸ್.ಬಸವರಾಜು ಅವರಿಗೆ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಮನವಿ ಮಾಡಿದೆ.

ನೈಋತ್ಯ ರೈಲ್ವೆ ವಲಯ, ಬೆಂಗಳೂರು ವಿಭಾಗ ವ್ಯಾಪ್ತಿಯ ಸಂಸದರ ಸಭೆ ಮುಂದಿನ ವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಸದರು ರೈಲ್ವೆ ಪ್ರಯಾಣಿಕರಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸುವಂತೆ ಶುಕ್ರವಾರ ವೇದಿಕೆ ಪದಾಧಿಕಾರಿಗಳು ಸಂಸದರಿಗೆ ಮನವಿ ಮಾಡಿದರು.

ಕರೊನಾ ಸಂದರ್ಭದಲ್ಲಿ ಆರಂಭಗೊಂಡಿರುವ ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ ಅಂಟಿಸಲಾಗಿದ್ದ ಸ್ಪೆಷಲ್ ಎಂಬ ಟ್ಯಾಗ್ ತೆಗೆದು ಮಾಮೂಲಿ ರೈಲುಗಳನ್ನಾಗಿ ಪರಿವರ್ತಿಸಬೇಕು. ಇದರಿಂದ ಪ್ರಯಾಣ ದರಗಳು ಕಡಿಮೆಯಾಗುವುದಲ್ಲದೆ, ಪ್ರಯಾಣಕ್ಕೆ ಅನುಕೂಲವಾಗಲಿದೆ. ವಿಶೇಷವಾಗಿ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಳಗ್ಗೆ 6.40ಕ್ಕೆ ಬೆಂಗಳೂರಿಂದ ಹೊರಡುತ್ತಿದ್ದ ಮಹಾಲಕ್ಷ್ಮೀ ರೈಲಿನ ಸಂಚಾರ ಹಾಗೂ ಸಂಜೆ 6.20ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಅರಸೀಕೆರೆ ರೈಲನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಬಹುತೇಕ ಎಲ್ಲ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಯಶವಂತಪುರದವರೆಗೆ ಸಂಚರಿಸುತ್ತಿವೆ. ಇವುಗಳನ್ನು ಮೊದಲಿನಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದವರೆಗೆ ವಿಸ್ತರಿಸಬೇಕು. ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಜನಸಾಮಾನ್ಯರಿಗೆ ಮತ್ತು ಅರಸೀಕರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಪ್ರಯಾಣಿಸುವವವರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವೇದಿಕೆ ವತಿಯಿಂದ ಹಿರಿಯ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿ ಸಗರ ಚಕ್ರವರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್ ಮತ್ತು ಶಿವಕುಮಾರ್ ಹಾಜರಿದ್ದರು.

ತುಮಕೂರು-ಅರಸೀಕೆರೆ ಡೆಮುರೈಲು : ಯಶವಂತಪುರ-ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣಗಳ ಮಧ್ಯೆ ನಿರಂತರವಾಗಿ ಡೆಮು ರೈಲು ಸಂಚಾರ ಆರಂಭಿಸಬೇಕು. ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ ಕನಿಷ್ಠ 2-3 ಜನರಲ್ ಬೋಗಿಗಳನ್ನು ಅಳವಡಿಸಬೇಕು. ಯಶವಂತಪುರ-ಮಂಗಳೂರು ರೈಲಿಗೆ ಸಂಪರ್ಕ ಕಲ್ಪಿಸಲು ತುಮಕೂರಿನಿಂದ ಹಾಸನಕ್ಕೆ ಲಿಂಕ್ ರೈಲು ಆರಂಭಿಸಬೇಕು. ತುಮಕೂರು-ಅರಸೀಕೆರೆ ನಡುವೆ ಬೆಳಗ್ಗೆ 8 ನಂತರ ಸಂಜೆ 5 ಗಂಟೆವರೆಗೆ ಯಾವುದೇ ಪ್ಯಾಸೆಂಜರ್ ರೈಲು ಸೇವೆ ಇಲ್ಲದ ಕಾರಣ ಈ ಅವಧಿಯಲ್ಲಿ ತುಮಕೂರಿನಿಂದ ಅರಸೀಕೆರೆಗೆ ಪ್ಯಾಸೆಂಜರ್ ಡೆಮು ರೈಲು ಆರಂಭಿಸುವಂತೆ ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net