ಮಾನವ ಕಳ್ಳ ಸಾಗಾಣಿಕೆಗೆ ಕಠಿಣ ಶಿಕ್ಷೆ: ಕೆ. ಗುರುಪ್ರಸಾದ

31GDG08
Published on

ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಉದ್ಘಾಟಿಸಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಮಾತನಾಡಿ  ಪ್ರತಿ ವರ್ಷವೂ ಜುಲೈ 31ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಆಚರಣೆ ಮಾಡುತ್ತಾ ಬಂದಿದೆ. ವಿಶ್ವ ಮಟ್ಟದಲ್ಲಿ ಆಚರಣೆ ಮಾಡುವ ಮೂಲಕ ಮಾನವ ಕಳ್ಳ ಸಾಗಾಣಿಕೆ ತಡೆಯುವ ಕುರಿತು  ಜಾಗೃತಿ ಮೂಡಿಸಲಾಗುತ್ತಿದೆ.

ಗುಲಾಮಗಿರಿ ಪದ್ದತಿ ನಿಷೇಧ ಇದ್ದು, ಕಾನೂನು ಉಲ್ಲಂಘಿಸಿದರೆ ತುಂಬಾ ಕಠಿಣ ಶಿಕ್ಷೆ  ಇದೆ. ಮಾನವ ಕಳ್ಳ ಸಾಗಾಣಿಕೆ ವಿವಿಧ ರೀತಿಯಲ್ಲಿದ್ದು  ಲೈಂಗಿಕ ಚಟುವಟಿಕೆಗಳಿಗೆ ಬಳಸುವುದು, ಭಿಕ್ಷೆ ಬೇಡಲು ಹಚ್ಚುವುದು, ಸಂಬಳ ಕೊಡದೇ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು,  ಶರೀರದ ಅಂಗಗಳನ್ನು ಹೊರತೆಗೆದು ಮಾರುವುದು ಇವೆಲ್ಲವುಗಳು ಮಾನವ ಕಳ್ಳ ಸಾಗಾಣಿಕೆಯ ಅನೇಕ ಆಯಾಮಗಳನ್ನು ಹೊಂದಿದೆ ಎಂದರು. ಕಳೆದ 5 ವರ್ಷದಲ್ಲಿ 3234 ವರದಿಗಳು ಬೆಳಕಿಗೆ ಬಂದಿವೆ. ಇಂತಹ ಕ್ರೌರ್ಯದಲ್ಲಿ ತೊಡಗಿದವರಿಗೆ ಕಾನೂನು ನಿಯಮದ ಪ್ರಕಾರ 7 ರಿಂದ 10 ವರ್ಷಗಳ ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ತುಂಬಾ ಕೆಟ್ಡ ಕೆಲಸವಾಗಿದ್ದು  ಅವರನ್ನು ಗುಲಾಮಗಿರಿಗೆ ಬಳಕೆ ಮಾಡುವುದು ದುರಾದೃಷ್ಟವಾಗಿದೆ. ಹಾಗೂ ಮಕ್ಕಳನ್ನು ನಿಧಿ ಆಸೆಗಾಗಿ ವಾಮಾಚಾರ ಮಾಡುವುದು. ಇಂತಹ ಕಾರ್ಯಗಳಿಗೆ ಮಕ್ಕಳನ್ನು ಬಳಸುವವರಿಗೆ ಗಂಭೀರವಾಗಿ ಪರಿಗಣಿಸಿ ಈ ಅಪರಾಧದಲ್ಲಿ ತೊಡಗಿದ ಅಪರಾಧಿüಗಳಿಗೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿ ಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಮಾನವ ಕಳ್ಳ ಸಾಗಾಣಿಕೆಯ ತಡೆಗಟ್ಟುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಎಂ.ಎಂ.ಅಸೂಟಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಾ ಮಾನವ ಕಳ್ಳ ಸಾಗಾಣಿಕೆಯು ಮಹಿಳೆ ಮತ್ತು ಮಕ್ಕಳ ಅಂಗಾಂಗಗಳ ಮಾರಾಟ ಅಥವಾ ಸಾಗಾಣಿಕೆ ಮತ್ತು ಜೀತ ಪದ್ಧತಿ, ವೇಶ್ಯಾವಾಟಿಕೆ, ಲೈಂಗಿಕ ದೌರ್ಜನ್ಯತೆ  ಹೀಗೆ ವಿವಿಧ ರೀತಿಯಲ್ಲಿದೆ. ಯಾವುದೇ ದಾಖಲೆ ಇಲ್ಲದೆ ದೊಡ್ಡ ದೊಡ್ಡ ಕಟ್ಟಡ ಕೆಲಸಗಳಿಗೆ ಮಹಿಳೆಯರು, ಮಕ್ಕಳು ಹಾಗೂ ಕಾರ್ಮಿಕರನ್ನು ದೇಶ ವಿದೇಶಗಳಿಂದ ಕರೆತಂದು ಅವರಿಗೆ ಸರಿಯಾಗಿ ಮಜೂರಿ ಕೊಡದೆ ಅವರಿಂದ ಕೆಲಸ ಮಾಡಿಸಿಕೊಂಡು ಅವರನ್ನು ಬೀದಿಗೆ ತರುವ ಕೆಲಸವನ್ನು ದೊಡ್ಡ ದೊಡ್ಡ ಗುತ್ತಿಗೆದಾರರು ಮಾಡುತ್ತಿದ್ದಾರೆ. ಇಂತಹ ಪ್ರಕರಣ ಕಂಡುಬಂದಲ್ಲಿ ಮಹಿಳೆಯರಿಗೆ ಸಂಬಂಧಿಸಿದ್ದಲ್ಲಿ  ಸಹಾಯವಾಣಿ ಸಂಖ್ಯೆಗೆ 181, ಮಕ್ಕಳ ಕಳ್ಳ ಸಾಗಾಣಿಕೆ ದೂರು ನೀಡಲು 1098 ಹಾಗೂ ಶೋಷಣೆಯ ವಿರುದ್ಧ ದೂರಗಳಿಗಾಗಿ ಸಹಾಯವಾಣಿ  112  ನ್ನು ಸಂಪರ್ಕಿಸಬಹುದಾಗಿದೆ.  ಎಲ್ಲಾ ತರಹದ ದೂರಗಳಿಗೆ ಪೋಲೀಸ್ಇಲಾಖೆಯು ಸಾರ್ವಜನಿಕರ  ಮನೆಯ ಬಾಗಿಲಿಗೆ ಬಂದು   ದೂರುಗಳನ್ನು ಸ್ವೀಕರಿಸುವ ಕೆಲಸವನ್ನು  ಮಾಡುತ್ತಿದೆ ಎಂದು ಕಾನೂನು ಹಾಗೂ ಪೋಲೀಸ್ಇಲಾಖೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.  

ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಉಪನಿರ್ದೇಶಕರಾದ ಪಿ.ವೈ. ಶೆಟ್ಟೆಪ್ಪನವರ, ಡಿಡಿಪಿಐ ಬಸವಲಿಂಗಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಎಮ್. ಹಿರೇಮನಿಪಾಟೀಲ, ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ರಾಧಾ ಮಣ್ಣೂರ, ಜಿಲ್ಲಾ ಮಕ್ಕಳ ಸಂಸ್ಥೆಗಳ ಅಧ್ಯಕ್ಷ ಅನ್ನಪೂರ್ಣ ಗಾಣಿಗೇರ ಹಾಗೂ  ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net