

ಮದ್ದೂರು: ಕಡು ಬಡತನ.... ಓದಲೇ ಬೇಕೆಂಬ ಹಂಬಲ... ಏನಾದರೂ ಸಾಧಿಸಬೇಕೆಂಬ ಹಠ... ನೊಂದವರಿಗೆ ಸಹಾಯ ಹಸ್ತ ಚಾಚಬೇಕೆಂಬ ಆಶಯ... ಇಂಥ ಮನಸ್ಥಿತಿಯ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ಬಾರಿಗೆ ನೀಟ್ ಪರೀಕ್ಷೆಯಲ್ಲೇ ಮೆಡಿಕಲ್‌ಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ತಾಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದ ನೇತ್ರಾವತಿ ಹಾಗೂ ಜಯರಾಮು ದಂಪತಿ ಪುತ್ರಿ ಕೆ.ಜೆ.ಮಾನಸಾ ಸಾಧನೆ ಮಾಡಿರುವ ವಿದ್ಯಾರ್ಥಿನಿಯಾಗಿದ್ದಾರೆ. 2ನೇ ಪುತ್ರಿ ಮಾನ್ಯಾ ಕೂಡ ಮಲ್ಲನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ತೀರಾ ಬಡ ಕುಟುಂಬದಿಂದ ಬಂದ ಮಾನಸ ಕುಂದನಕುಪ್ಪೆ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಲ್ಲನಕುಪ್ಪೆ ಸರ್ಕಾರಿ ಪ್ರೌಢ ಶಿಕ್ಷಣ ಮುಗಿಸಿ ನಂತರ ನೆಲಮಂಗಲದ ಅಡಕ ಮಾರನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಮೊದಲ ಬಾರಿಗೆ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ_ ಶಿಕ್ಷಣ_ ಸಂಸ್ಥೆಯಲ್ಲಿ ಎಂಬಿಬಿಎಸ್‌ಗೆ ಅರ್ಹತೆ ಪಡೆದು ಮಂಡ್ಯದ ಮೆಡಿಕಲ್ ಕಾಲೇಜಿನಲ್ಲಿ ಸ್ಥಾನ ಪಡೆದಿದ್ದಾರೆ.
ತಂದೆ ಜಯರಾಮು ವ್ಯವಸಾಯ, ತಾಯಿ ನೇತ್ರಾವತಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರಿ ಮಾನಸಾಳನ್ನು ಚೆನ್ನಾಗಿ ಓದಿಸಬೇಕೆಂಬ ಹಠ, ಛಲದಿಂದ ತಮಗೆ ಎಷ್ಟೇ ಕಷ್ಟವಾದರೂ ಚೆನ್ನಾಗಿ ಓದಿಸಿ ಮೆಡಿಕಲ್ ಸೀಟ್ ತೆಗೆದುಕೊಂಡಿರುವುದರಿಂದ ಅವರ ಸಂತೋಷ ಇಮ್ಮಡಿಗೊಂಡಿದೆ.
ಮಗಳು ಚೆನ್ನಾಗಿ ಓದಬೇಕು. ಮೆಡಿಕಲ್‌ನಲ್ಲೂ ಉತ್ತಮ ಅಂಕಗಳಿಸಿ ತೇರ್ಗಡೆಗೊಂಡು ವೈದ್ಯೆಯಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಚಿಕಿತ್ಸೆ ಕೊಡಬೇಕು ಎಂಬುವುದು ಹಂಬಲ ಎನ್ನುತ್ತಾರೆ ಪಾಲಕರು.
ಮಾನಸಾ ಸರ್ಕಾರಿ ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸಿ ಮೆಡಿಕಲ್ ಸೀಟ್ ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಉನ್ನತ ಅಂಕ ಗಳಿಸಿ ಸಾಧನೆ ಮಾಡಲು ಸಾಧ್ಯ ಎಂಬ ಭ್ರಮೆಯನ್ನು ಮಾನಸಾ ಹೋಗಲಾಡಿಸಿದ್ದು, ಸರ್ಕಾರಿ ಶಾಲೆಯಲ್ಲಿ ಓದಿದರೂ ಉನ್ನತ ಸಾಧನೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ನನ್ನ ತಂದೆ, ತಾಯಿ ಕಷ್ಟಪಟ್ಟು ಓದಿಸಿದರು. ಶಿಕ್ಷಕರು, ಉಪನ್ಯಾಸಕರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ನನ್ನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟರು. ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿದ ಪರಿಣಾಮ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆಯೂ ಕಷ್ಟಪಟ್ಟು ಓದಿ ಮೆಡಿಕಲ್ ಮುಗಿಸಿ ಗ್ರಾಮಾಂತರ ಪ್ರದೇಶದ ಜನರ ಸೇವೆ ಮಾಡಬೇಕೆಂಬುದು ನನ್ನ ಆಶಯ. ಕೆ.ಜೆ.ಮಾನಸಾ ಮೆಡಿಕಲ್ ವಿದ್ಯಾರ್ಥಿನಿ, ಕುಂದನಕುಪ್ಪೆ ಕೆ.ಜೆ.ಮಾನಸಾ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯಾಗುವ ಜತೆಗೆ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿರುವುದು ನಿಜಕ್ಕೂ ಪ್ರಶಂಸನೀಯ. ಮಾನಸಾಳ ನಿರಂತರ ಶ್ರಮ, ಪಾಲಕರು ಕಷ್ಟಪಟ್ಟು ಓದಿಸಿದ್ದು ಸಾರ್ಥಕವಾಗಿದೆ. ಮಾನಸಾಳ ರೀತಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚೆಚ್ಚು ಸಾಧನೆ ಮಾಡಬೇಕು. ಕೆ.ಆರ್.ಕುಮಾರ್ ಅಧ್ಯಕ್ಷ, ಸುಮುಖ ನಿಧಿ ಲಿಮಿಡೆಟ್, ಕುಂದನಕುಪ್ಪೆ.