ಪಾಳು ಬಿದ್ದಿವೆ ಮನಪಾ ವಸತಿಗೃಹಗಳು

ಪಾಳು ಬಿದ್ದಿವೆ ಮನಪಾ ವಸತಿಗೃಹಗಳು
ಪಾಳು ಬಿದ್ದಿವೆ ಮನಪಾ ವಸತಿಗೃಹಗಳು
Published on
ಮಂಗಳೂರು: ಅಧಿಕಾರಿಗಳ ಬೇಜಾವಬ್ದಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಯಾವ ರೀತಿ ವ್ಯರ್ಥವಾಗುತ್ತಿವೆ ಎನ್ನುವುದಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡದಲ್ಲಿರುವ ಪಾಲಿಕೆಯ ಜಂಟಿ ಆಯುಕ್ತರು ಹಾಗೂ ಕಾರ್ಯಕಾರಿ ಅಭಿಯಂತರ ಅವರಿಗೆ ಮೀಸಲಾದ ವಸತಿ ಗೃಹಗಳೇ ಸಾಕ್ಷಿ.
ವರ್ಗಾವಣೆಗೊಂಡು ಬರುವ ಪಾಲಿಕೆಯ ಜಂಟಿ ಆಯುಕ್ತರಿಗೆ ಹಾಗೂ ಕಾರ್ಯಕಾರಿ ಅಭಿಯಂತರ ಅವರಿಗೆ ಆಯುಕ್ತರು ಮನೆಗಳನ್ನು ಹಂಚಿಕೆ ಮಾಡಬೇಕು. ಆದರೆ ಅಧಿಕಾರಿಗಳು ವರ್ಗಾವಣೆಗೊಂಡು ಬಂದು ಮೂರ್ನಾಲ್ಕು ವರ್ಷವಾದರೂ ಇದುವರೆಗೆ ಹಂಚಿಕೆ ಮಾಡಿಲ್ಲ. ಪ್ರಸ್ತುತ ಭೂತ ಬಂಗಲೆಯಂತೆ ಕಾಡು ಬೆಳೆದು ನಿಂತಿದೆ.
ಗೇಟ್‌ಗೆ ಬೀಗವೇ ಹಾಕಿಲ್ಲ
ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಾರ್ವಜನಿಕ ಸೊತ್ತುಗಳನ್ನು ರಕ್ಷಣೆ ಮಾಡುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಪಾಳು ಬಿದ್ದಿರುವ ಈ ಮನೆಗಳ ಗೇಟ್‌ಗೆ ಬೀಗವೇ ಹಾಕಿಲ್ಲ. ಯಾರು ಬೇಕಾದರೂ ಬಂದು ಹೋಗಬಹುದು. ಈ ಮನೆಯ ಆವರಣದಲ್ಲಿ ರಟ್ಟು ಹಾಸಿ ಮಲಗಲು ವ್ಯವಸ್ಥೆ ಮಾಡಲಾಗಿದೆ. ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಮೆಟ್ಟಿಲುಗಳಲ್ಲಿ ಪಾದರಕ್ಷೆಗಳನ್ನು ಇಡಲಾಗಿದೆ. ಬಾಗಿಲುಗಳು ತುಕ್ಕು ಹಿಡಿಯಲಾರಂಭಿಸಿವೆ. ಕಟ್ಟಡದ ಸುತ್ತಲೂ ಗಿಡಗಳು ಬೆಳೆದು, ತ್ಯಾಜ್ಯ ತುಂಬಿಕೊಂಡಿವೆ.
ದುರಸ್ತಿಗೆ ಲಕ್ಷಾಂತರ ರೂ. ವ್ಯಯ
ಸಾಮಾನ್ಯವಾಗಿ ಮೂರು ವರ್ಷಗಳಿಗೊಮ್ಮೆ ಈ ಕಟ್ಟಡಗಳ ನವೀಕರಣ ಮಾಡಲಾಗುತ್ತದೆ. ನಿರ್ವಹಣೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಲಾಗಿದೆ. ಆದರೆ, ದುರಸ್ತಿ ಕಾರ್ಯ ಮುಗಿದ ನಂತರ ಯಾವುದೇ ಅಧಿಕಾರಿಗಳು ಈ ಮನೆಗಳಿಗೆ ಕಾಲಿಟ್ಟಿಲ್ಲ. ಅಧಿಕಾರಿಗಳಿಗೆ ವೇತನದಲ್ಲಿ ಮನೆ ಭತ್ಯೆ ಬರುತ್ತಿದ್ದು, ಅವರು ಐಷಾರಾಮಿ ಖಾಸಗಿ ಮನೆಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದು, ಸರ್ಕಾರಿ ಕಟ್ಟಡಗಳು ಮಾತ್ರ ಪಾಳು ಬೀಳುತ್ತಿವೆ. ಒಂದೆಡೆ ನಗರದ ಅಭಿವೃದ್ಧಿಗೆ ಹಣದ ಕೊರತೆಯಿದೆ ಎನ್ನುವ ಅಧಿಕಾರಿಗಳು ಇನ್ನೊಂದು ಕಡೆ ಸಾರ್ವಜನಿಕ ಆಸ್ತಿಯನ್ನು ಸದ್ಭಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಸಾರ್ವಜನಿಕರ ಆಕ್ಷೇಪ
ನಮ್ಮ ತೆರಿಗೆ ಹಣ ಇರುವುದು ಕಟ್ಟಡಗಳನ್ನು ಕೇವಲ ಪ್ರದರ್ಶನಕ್ಕೆ ಇಡುವುದಕ್ಕಲ್ಲ. ವಸತಿ ಗೃಹಗಳು ಬಳಕೆಯಾಗದಿದ್ದರೆ ಅವುಗಳನ್ನು ಬೇರೆ ಉದ್ದೇಶಕ್ಕೆ ಬಳಸಲಿ ಅಥವಾ ಸರ್ಕಾರಿ ಕಚೇರಿಗಳನ್ನಾಗಿ ಮಾರ್ಪಡಿಸಲಿ. ಪ್ರತಿ ವರ್ಷ ದುರಸ್ತಿಗೆ ಹಣ ಖರ್ಚು ಮಾಡಿ ಪಾಳು ಬಿಡುವುದು ಜನಸಾಮಾನ್ಯರಿಗೆ ಮಾಡುವ ದ್ರೋಹ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಬಂಗಲೆ, ಜಂಟಿ ಆಯುಕ್ತರ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರ ವಸತಿಗೃಹಗಳು ಕೇವಲ ನವೀಕರಣ ಮಾಡಿ ಅಲ್ಲಿಗೇ ಪಾಳು ಬೀಳಲು ಬಿಡುವುದಕ್ಕೆ ಸೀಮಿತವಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಾರ್ವಜನಿಕರ ತೆರಿಗೆಯ ಹಣ ಪೋಲು ಆಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ತೆರಿಗೆ ಪಾವತಿಸುವ ಜನರಾಗಲಿ ಮಾತನಾಡುವುದಿಲ್ಲ.
ಹನುಮಂತ ಕಾಮತ್
ಸಾಮಾಜಿಕ ಕಾರ್ಯಕರ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net