ಮನಪಾ ಜನನ-ಮರಣ ಪತ್ರ ಪಡೆಯುವುದೇ ಸವಾಲು - ಒಂದೇ ಕೌಂಟರ್‌ನಲ್ಲಿ ನೋಂದಣಿ - ಹಿರಿಯ ನಾಗರಿಕರಿಗೂ ಇಲ್ಲ ವಿನಾಯಿತಿ

mng--23 Oct Mcc
Published on

ಮಂಗಳೂರು: ಮನಪಾ ಜನನ-ಮರಣ ನೋಂದಣಿ ಕೌಂಟರ್ ಎದುರು ಬೆಳಗ್ಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದೇನೆ. 12 ಗಂಟೆ ಕಳೆದರೂ ಕೌಂಟರ್‌ಗೆ ತಲುಪಿಲ್ಲ. ಹಿರಿಯ ನಾಗರಿಕರು, ಮಹಿಳೆಯರಿಗೆ ಇಲ್ಲಿ ಬಂದು ಗಂಟೆಗಟ್ಟಲೆ ನಿಲ್ಲುವುದೇ ಸವಾಲಾಗಿದೆ ಎಂದು ಬೆಂದೂರ್‌ವೆಲ್‌ನ 74 ವರ್ಷದ ಲ್ಯಾನ್ಸಿ ಡಿಸೋಜ ಹೇಳಿದರು.

ರಾಜ್ಯ ಸರ್ಕಾರದ ಸಮೀಕ್ಷೆಯ ಕೆಲಸಕ್ಕಾಗಿ ಮಹಾನಗರ ಪಾಲಿಕೆಯ ಡಾಟಾ ಎಂಟ್ರಿ ಆಪರೇಟರ್‌ಗಳು, ಕಿರಿಯ ಇಂಜಿನಿಯರ್‌ಗಳು ಸೇರಿದಂತೆ ಬಹುತೇಕ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಜನರಿಗೆ ಅಗತ್ಯವಾಗಿ ಬೇಕಾದ ಜನನ-ಮರಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ.

ಪಾಲಿಕೆಯ ಮೆಟ್ಟಿಲಿನಿಂದಲೇ ಗುರುವಾರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಒಂದೇ ಕೌಂಟರ್ ಕಾರ್ಯಾಚರಿಸುತ್ತಿರುವುದರಿಂದ ಹಲವಾರು ದಿನಗಳಿಂದ ನೋಂದಣಿ ನಡೆಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕಂಪ್ಯೂಟರ್‌ನಲ್ಲಿ ಮಾಹಿತಿ ಎಂಟ್ರಿ ಮಾಡಬೇಕಾದ ಹಿನ್ನೆಲೆಯಲ್ಲಿ ಒಂದು ಅರ್ಜಿ ವಿಲೇವಾರಿ ಮಾಡಲು 10 ನಿಮಿಷ ಸಮಯಾವಕಾಶ ಬೇಕು. ಆದರೂ ಸಿಬ್ಬಂದಿ ತಮ್ಮಿಂದಾದಷ್ಟು ವೇಗದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವುದು ಕಂಡು ಬಂತು.

ದಿನವೊಂದಕ್ಕೆ ಸರಾಸರಿ 150ರಿಂದ 200ರಷ್ಟು ಜನನ-ಮರಣ ನೋಂದಣಿಯಾಗುತ್ತದೆ. ಅಷ್ಟು ಜನರ ಅರ್ಜಿ ಸ್ವೀಕರಿಸಿ, ಮೊದಲು ಅರ್ಜಿ ನೀಡಿರುವವರಿಗೆ ಪ್ರಮಾಣಪತ್ರ ವಿತರಿಸಬೇಕು. ಇಷ್ಟು ಕೆಲಸವನ್ನು ನಿರ್ವಹಿಸಲು ಕಡಿಮೆ ಎಂದರೂ ಎರಡು ಕೌಂಟರ್‌ಗಳು ಬೇಕು. ಹೆಚ್ಚಿನ ಸಿಬ್ಬಂದಿಯನ್ನೂ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಐವನ್ ಡಿಸೋಜ ಭೇಟಿ: ಪಾಲಿಕೆಯ ಪ್ರವೇಶ ದ್ವಾರದಲ್ಲಿ ಸರತಿ ಸಾಲನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು. ಬಳಿಕ ಕೌಂಟರ್‌ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಜತೆ ಮಾತುಕತೆ ನಡೆಸಿದರು. ಬಳಿಕ ಪಾಲಿಕೆಯ ಆರೋಗ್ಯ ವಿಭಾಗದ ಮುಖ್ಯಸ್ಥ ಮಂಜಯ್ಯ ಶೆಟ್ಟಿ ಅವರನ್ನು ಸಂಪರ್ಕಿಸಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಟೋಕನ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ಸಮೀಕ್ಷೆಗೆ ಕಳುಹಿಸಿರುವುದರಿಂದ ಸಾರ್ವಜನಿಕರ ಬಹಳಷ್ಟು ಕೆಲಸಗಳು ಆಗದೆ ಬಾಕಿ ಉಳಿದಿವೆ. ಈಗ ಮತ್ತೆ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸ ಆರಂಭಿಸಿದ್ದು, ಸಾರ್ವಜನಿಕರು ಎಲ್ಲರೂ ಏಕಕಾಲದಲ್ಲಿ ಬರುವುದರಿಂದ ಸಿಬ್ಬಂದಿಗಳ ಮೇಲೂ ಒತ್ತಡ ಬೀಳುತ್ತಿದೆ. ಇವೆಲ್ಲವು ಸರಿಯಾಗಲು ಇನ್ನೂ ಒಂದೆರಡು ತಿಂಗಳುಗಳೇ ಬೇಕು ಎನ್ನುತ್ತಾರೆ ಸರ್ಕಾರಿ ಇಲಾಖೆಯ ಸಿಬ್ಬಂದಿ.

ಸರ್ಕಾರದ ಸಮೀಕ್ಷೆ ಕೆಲಸದ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಅದರಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಇದರಿಂದಾಗಿ ಒಂದಷ್ಟು ಸಮಸ್ಯೆಗಳಾಗಿವೆ. ಜನನ-ಮರಣ ನೋಂದಣಿ ಕೌಂಟರ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದ್ದೇನೆ.

ಐವನ್ ಡಿಸೋಜ

ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net