

ಖರ್ಗೆ ಧರಂ ಒತ್ತಾಸೆಯಂತೆ ೩೭೧ (ಜೆ) ತಿದ್ದುಪಡಿ | ಇಎಸ್‌ಐಸಿ ಆಸ್ಪತ್ರೆ ಸಿಯುಕೆ ಮಂಜೂರು ಮಾಡಿದ್ದ ಆರ್ಥಿಕ ತಜ್ಞ
ಬಾಬುರಾವ ಯಡ್ರಾಮಿ ಕಲಬುರಗಿ
ಹಿಂದುಳಿದ ಪ್ರದೇಶಗಳ ಪ್ರಗತಿ ಮಾಡಲು ದಿಟ್ಟ ಹೆಜ್ಜೆ ಇರಿಸಿದ್ದ ಆರ್ಥಿಕ ತಜ್ಞರಾಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಕಲ್ಯಾಣ ಕರ್ನಾಟಕದ ಜನತೆ ನೆನಪಿನಲ್ಲಿ ಇಟ್ಟುಕೊಳ್ಳುವಂತ ಮಹತ್ವದ ಕೊಡುಗೆ ನೀಡುವ ಮೂಲಕ ಕಲಬುರಗಿ ವಿಭಾಗದ ಶೈಕ್ಷಣಿಕ ಮತ್ತು ಉದ್ಯೋಗ ಪ್ರಗತಿಗೆ ನಾಂದಿ ಹಾಡಿದ್ದರು.
ಈಶಾನ್ಯ ರಾಜ್ಯಗಳಂತೆ ತೀರಾ ಹಿಂದುಳಿದ್ದ ಆಗಿನ ಹೈದರಾಬಾದ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ವಿಶೇಷ ಸ್ಥಾನ ಕಲ್ಪಿಸಬೇಕು ಎಂಬ ಹೋರಾಟ ತೀವ್ರಗೊಂಡಿದ್ದ ವೇಳೆಯಲ್ಲಿ ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾಗಿದ್ದ ಮಾಜಿ ಸಿಎಂ ಧರ್ಮಸಿಂಗ್ ಅವರ ಒತ್ತಾಸೆಯಂತೆ ಸಂವಿಧಾನ ತಿದ್ದುಪಡಿ ಮಾಡಿದ ಶ್ರೇಯಸ್ಸು ಮನಮನೋಹನಸಿಂಗ್ ಅವರಿಗೆ ಸಲ್ಲುತ್ತದೆ.
ಸಂವಿಧಾನದ ೩೭೧ ಜೆ ತಿದ್ದುಪಡಿಯಾದ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುವಂತೆ ಆಯಿತು. ಆದರೆ,ಕೇಂದ್ರದಿAದ ವಿದರ್ಭ ಮಾದರಿಯಲ್ಲಿ ಅನುದಾನ ನೀಡಬೇಕು ಎಂಬ ಬೇಡಿಕೆ ಮಾತ್ರ ಕೈಗೂಡಲಿಲ್ಲ. ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಖುದ್ದು ಪ್ರಸ್ತಾವನೆ ಹಿಡಿದುಕೊಂಡು ವಿರೋಧ ಪಕ್ಷಗಳ ನಾಯಕರು, ಮಿತ್ರ ಪಕ್ಷಗಳ ನಾಯಕರ ಮನೆ-ಮನೆಗಳಿಗೆ ಭೇಟಿ ನೀಡಿ ಸಂಸತ್ತಿನಲ್ಲಿ ಹೈಕಕ್ಕಾಗಿ ಸಂವಿಧಾನ ತಿದ್ದುಪಡಿಗೆ ಬೆಂಬಲಿಸುವAತೆ ಮನವೊಲಿಸುವ ಕೆಲಸ ಮಾಡಿದರು. ಅದರ ಫಲವನ್ನು ಈ ಭಾಗದ ಜನರು ಇಂದು ಅನುಭವಿಸುತ್ತಿದ್ದು ಎರಡು ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಒಂದಷ್ಟು ಪ್ರಗತಿಯ ಹೆಜ್ಜೆಗಳು ಕಾಣುತ್ತಿವೆ.
ಇಡಿ ನಾಡು ಕಲಬುರಗಿ ಕಡೆಗೆ ನೋಡುವಂತೆ ಮಾಡುತ್ತಿರುವ ಐತಿಹಾಸಿಕವಾಗಿರುವ ಬೃಹತ್ ಇಎಸ್‌ಐಸಿ ಮೆಡಿಕಲ್ ಕಾಂಪ್ಲೆಕ್ಸ್ ಹಾಗೂ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮಂಜೂರು ಮಾಡಬೇಕು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಬೇಡಿಕೆಗೆ ಅಸ್ತು ಎಂದು ಅಂಕಿತ ಹಾಕಿದವರು ಮನಮೋಹನಸಿಂಗ್. ಹೀಗಾಗಿ ಕಲಬುರಗಿ ಕಲ್ಯಾಣಕ್ಕೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ಶ್ರೇಯಸ್ಸು ಅವರದ್ದು.
ಕಲಬುರಗಿ ಜನರ ಬಹುದಿನಗಳ ಬೇಡಿಕೆಯಂತೆ ರೈಲ್ವೆ ವಿಭಾಗ, ಕೈಗಾರಿಕೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮಹತ್ವರ ಬದಲಾವಣೆ ತರಲಿದ್ದ ನಿಮ್ಜ್ ಸಹ ಅವರ ಅವಧಿಯಲ್ಲಿ ಕಲಬುರಗಿಗೆ ಮಂಜೂರಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಎರಡು ಯೋಜನೆಗಳ ಅನುಷ್ಠಾನಗೊಳಿಸಲು ಆಸಕ್ತಿ ತೋರಲಿಲ್ಲ. ಪರಿಣಾಮ ನಿಮ್ಜ್ ರದ್ದರೆ, ರೈಲ್ವೆ ವಿಭಾಗ ಕಾಗದದಲ್ಲಿಯೇ ಉಳಿದುಕೊಂಡು ತೆವಳುತ್ತಿದೆ.
ಕಲ್ಯಾಣ ಕರ್ನಾಟಕ ಮೇಲೆ ವಿಶೇಷ ಪ್ರೀತಿಯನ್ನು ಮನಮೋಹನಸಿಂಗ್ ಹೊಂದಿದ್ದರು. ಅದಕ್ಕೆ ಖರ್ಗೆ ಕಾರಣರಾಗಿದ್ದರು. ೨೦೦೬, ಸೆಪ್ಟಂಬರ್ ೧ರಂದು ಸೋಲ್ಲಾಪುರಕ್ಕೆ ತೆರಳಲು ಮನಮೋಹನಸಿಂಗ್ ಅವರು ಬೀದರನ ವಾಯ್ಹುನೆಲೆಗೆ ಬಂದಿಳಿದ್ದರು. ಗುರುನಾನಕರ ಭಕ್ತರಾಗಿದ್ದರು.
ಜಲ ಪ್ರಳಯವಾದ ನೆರವಿಗೆ ಧಾವಿಸಿದ್ದರು
೨೦೦೫ ಮತ್ತು ೨೦೦೯ರಲ್ಲಿ ಕೃಷ್ಣಾ, ಭೀಮಾ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡು ಇಡಿ ಉತ್ತರ ಕರ್ನಾಟಕವೇ ಜಲಪ್ರಳಯದಲ್ಲಿ ಸಿಲುಕಿ ನಲುಗಿದಾಗ ನೆರವಿಗೆ ಧಾವಿಸಿದವರು ಪ್ರಧಾನಿಯಾಗಿದ್ದ ಮನಮೋಹಸಿಂಗ್ ಅವರು. ಕಲಬುರಗಿ,ವಿಜಯಪುರ,ಬಾಗಲಕೋಟ,ಬೆಳಗಾವಿ,ಯಾದಗಿರಿ ಜಿಲ್ಲೆಗಳ ಜತೆಗೆ ನೆರೆಯ ಆಂಧ್ರ ಪ್ರದೇಶದಲ್ಲಿಯೂ ವೈಮಾನಿಕ ಸಮೀಕ್ಷೆ ನಡೆಸಿದ್ದರು.
೨೦೦೫ ಆಗಷ್ಟ ೧೬ ರಂದು ಮತ್ತು ೨೦೦೯ ಅಕ್ಟೋಬರ್ ೧೦ ರಂದು ಎರಡು ಕಲಬುರಗಿ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಉತ್ತರ ಕರ್ನಾಟಕದ ಭೀಕರ ಪರಿಸ್ಥಿತಿಯನ್ನು ಕಂಡು ೨೦೦೦ ಕೋಟಿ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿದ್ದರು.
====