ಡಾ. ಮನಮೋಹನ್​ ಸಿಂಗ್​ ನೆನೆದ ಹುಬ್ಬಳ್ಳಿ ಸಂಬಂಧಿಕರು

IMG_20241227_202900_321.jpg
Published on

ಹುಬ್ಬಳ್ಳಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಲ್ಲಿಯ ಅವರ ಕುಟುಂಬ ಸದಸ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಡಾ. ಸಿಂಗ್ ಅವರ ಹತ್ತಿರದ ಸಂಬಂಧಿಕರು ದಶಕಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಪತ್ನಿಯ ಸಹೋದರಿ ಹರಪ್ರೀತ್ ಕೌರ್ ಹುಬ್ಬಳ್ಳಿಯಲ್ಲಿದ್ದರು. ಕೌರ್ ಅವರ ಪುತ್ರ ಮನಮಿತ್ ಕೊಯ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ಮನಮೋಹನ್ ಸಿಂಗ್ ಅವರ ಅಗಲಿಕೆ ಅತ್ಯಂತ ನೋವು ತಂದಿದೆ. ನಮಗೆ ಮಾತ್ರವಲ್ಲ ಇಡೀ ದೇಶಕ್ಕೆ ಆಗಿರುವ ದೊಡ್ಡ ನಷ್ಟವಿದು ಎಂದು ಹೇಳಿದ್ದಾರೆ.

ರಿಜರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗಿನಿಂದ ನಮ್ಮ ಕುಟುಂಬದ ಜತೆ ಒಡನಾಟ ಹೊಂದಿದ್ದರು. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅತ್ಯಂತ ಸರಳ ವ್ಯಕ್ತಿತ್ವದವರು ಎಂದು ಸ್ಮರಿಸಿದರು.

ಕೆಲಸದಲ್ಲಿ ಎಷ್ಟೇ ವ್ಯಸ್ತರಾಗಿದ್ದರೂ ಕುಟುಂಬ ಸದಸ್ಯರ ಜೊತೆ ಬೆರೆಯುತ್ತಿದ್ದರು. ಮುಂಬೈನಲ್ಲಿ ಇದ್ದಾಗ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ದೆಹಲಿಗೆ ಹೋದ ಬಳಿಕ ಒಂದಿಷ್ಟು ಒಡನಾಟ ಕಡಿಮೆಯಾಗಿತ್ತು.

ಹುಬ್ಬಳ್ಳಿಯಿಂದ ನಮ್ಮ ಕುಟುಂಬದ ಸದಸ್ಯರು ಆಗಾಗ್ಗೆ ಹೋಗಿ ಬರುತ್ತಿದ್ದೆವು. ದೆಹಲಿಯಲ್ಲಿ ನಡೆಯುವ ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳಲು ಹೊರಟಿದ್ದೇವೆ ಎಂದು ಹೇಳಿದರು.

ದೊಡ್ಡಪ್ಪ (ಮನಮೋಹನ ಸಿಂಗ್) ಅವರೊಂದಿಗೆ ನಮ್ಮ ಕುಟುಂಬದ ಒಡನಾಟ ಮೊದಲಿನಿಂದಲೂ ಚೆನ್ನಾಗಿದೆ. ಅವರ ಪತ್ನಿ ಗುರುಶರಣ್ ಕೌರ್ ಹಾಗೂ ನಮ್ಮ ತಾಯಿ ಸ್ವಂತ ಅಕ್ಕ ತಂಗಿಯರು. ಹೀಗಾಗಿ ಬಾಲ್ಯದಿಂದಲೂ ನಾವು ಅವರ ಮನೆಗೆ ಹೋಗಿ ಬಂದು ಮಾಡುತ್ತಿದ್ದೆವು. ಹೀಗಾಗಿ ದೊಡ್ಡಪ್ಪನ ಜೊತೆಗೆ ಉತ್ತಮ ಬಾಂಧವ್ಯವಿತ್ತು. ಕನಿಷ್ಟ 3- 4 ತಿಂಗಳಿಗಾದರೂ ಒಮ್ಮೆ ದೂರವಾಣಿಯ ಮುಖಾಂತರ ಉಭಯ ಕುಶಲೋಪರಿ ಮಾತನಾಡುತ್ತಿದ್ದೆವು. ಅವರ ಬಳಿ ಹೋಗುವಾಗ ಧಾರವಾಡ ಪೇಢೆ ತೆಗೆದುಕೊಂಡು ಹೋಗುತ್ತಿದ್ದೇವು ಎಂದು ತಿಳಿಸಿದರು.

ನಮ್ಮ ತಾಯಿ ನಿಧನದ ಹಿನ್ನೆಲೆಯಲ್ಲಿ 2010ರ ಜನವರಿ 7ರಂದು ನಮ್ಮ ವಿದ್ಯಾನಗರದ ನಿವಾಸಕ್ಕೆ ಗುರುಶರಣ ಕೌರ್ ಹಾಗೂ ಅವರ ಮಗಳು ಧಮನ್ ಸಿಂಗ್ ಆಗಮಿಸಿದ್ದರು. ಒಂದು ದಿನ ನಮ್ಮ ಮನೆಯಲ್ಲೆ ತಂಗಿ ಮಾರನೆ ದಿನ ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎಂದು ನೆನಪಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net