ಖನಿಜ ಪ್ರತಿಷ್ಠಾನದ ನಿಧಿಯಲ್ಲಿ ಅಭಿವೃದ್ಧಿ ಕೆಲಸಗಳ ನಿರ್ವಹಣೆ

98876
Published on

ಚಿಕ್ಕಬಳ್ಳಾಪುರ: ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 38.09 ಕೋಟಿ ರೂ ವೆಚ್ಚದಲ್ಲಿ 54 ವಿವಿಧ ಅಭಿವೃದ್ಧಿ ಕೆಲಸಗಳಿಗೆ (2024 ನೇ ಸಾಲಿನ ಜುಲೈನಿಂದ ನವೆಂಬರ್) ಆಡಳಿತಾತ್ಮಕ ಅನುಮೋದನೆ ನೀಡಿದ್ದು ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ಲಭಿಸುತ್ತಿರುವ ಆದಾಯಕ್ಕೆ ಅನುಗುಣವಾಗಿ ಸ್ಥಳಿಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ವಿಶೇಷ ಅನುದಾನವನ್ನು ಮೀಸಲಿಟ್ಟು, ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ನಿರ್ವಹಿಸಲಾಗುತ್ತಿದೆ.

ಬೆಂಗಳೂರಿಗೆ ಸಮೀಪದಲ್ಲಿರುವ ಈ ಭಾಗದಲ್ಲಿ ಬೆಟ್ಟ ಗುಡ್ಡಗಳು ವ್ಯಾಪಕವಾಗಿದ್ದು ಕಲ್ಲು ಗಣಿಗಾರಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ 79 ಕ್ರಷರ್ಗಳು, ಗ್ರಾನೈಟ್ ಕ್ವಾರಿ 69, ಕಟ್ಟಡ ಗಣಿ ಕೇಂದ್ರಗಳು 136, ಇತರೆ 3 ಸೇರಿದಂತೆ 287 ಗಣಿ ಗುತ್ತಿಗೆ ಕೇಂದ್ರಗಳಿವೆ. ವಾರ್ಷಿಕ ಸರಾಸರಿ 80 ಕೋಟಿ ರೂ ಆದಾಯವನ್ನು ನಿರೀಸುತ್ತಿದ್ದು ಈ ಪೈಕಿ ಕನಿಷ್ಠ ಶೇ.80 ರಷ್ಟು ಹಣವು ಸಂಗ್ರಹವಾಗುತ್ತಿರುತ್ತದೆ. ಜತೆಗೆ ನಿಯಮಬಾಹಿರವಾಗಿ ಕ್ರಷರ್ಗಳಲ್ಲಿ ಸ್ಫೋಟ, ಕಲ್ಲುಗಳ ಓವರ್ ಲೋಡ್ ಸಾಗಾಣೆ, ಪರವಾನಗಿ ಇಲ್ಲದೇ ಟಿಪ್ಪರ್ ಲಾರಿಗಳ ಸಂಚಾರ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಸಂಬAಧಿಸಿದAತೆ ಕೋಟ್ಯಂತರ ರೂ ದಂಡ ವಸೂಲಿಯಾಗುತ್ತಿರುತ್ತದೆ.

*ಜಿಲ್ಲಾ ಖನಿಜ ಪ್ರತಿಷ್ಠಾನ

ಕಲ್ಲು ಗಣಿಗಾರಿಕೆಯಿಂದ ಸ್ಥಳಿಯವಾಗಿ ಉದ್ಭವಿಸುವ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಖನಿಜ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕ್ರಿಯಾಯೋಜನೆ ರೂಪಿಸುವುದು, ಅನುದಾನ ಮಂಜೂರು, ಕಾಮಗಾರಿಗಳ ನಿರ್ವಹಣೆ ಸೇರಿದಂತೆ ಇತರ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ಕೋಟ್ಯಂತರ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ, ಶಾಲಾ ಕೊಠಡಿಗಳು, ರಸ್ತೆ ಮತ್ತು ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

*ಆದಾಯದಲ್ಲಿ ಪರಿಸರ ಹಾಳು

ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆನಾರಾಯಣಪುರ, ಪೆರೇಸಂದ್ರ ಸೇರಿದಂತೆ ವಿವಿಧ ಭಾಗಗಳಲ್ಲಿನ ಕಲ್ಲುಕ್ವಾರಿಗಳಲ್ಲಿ ಬಂಡೆಗಳನ್ನು ಹೊಡೆದು, ಸಾಗಿಸಿದ್ದು ಬೆಟ್ಟಗುಡ್ಡಗಳು ಬೋಳು ಬೋಳಾಗಿ ಕಾಣಿಸುತ್ತಿರುತ್ತವೆ. ನಿರಂತರ ಸ್ಫೋಟಕಗಳ ಮತ್ತು ದೊಡ್ಡ ಯಂತ್ರೋಪಕರಣಗಳ ಬಳಕೆಯಿಂದ ಹರಡಿಕೊಂಡಿರುವ ಜಲ್ಲಿ ಧೂಳು, ಕಿತ್ತುಕೊಂಡು ಬಂದAತೆ ಕಲ್ಲುಗಳು, ನಿರ್ಮಾಣವಾಗಿರುವ ದೊಡ್ಡ ಗುಂಡಿಗಳು ಪ್ರಕೃತಿ ನಾಶವನ್ನು ಸಾರುತ್ತಿರುತ್ತದೆ. ಇದರ ಬಗ್ಗೆ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದು ಆದಾಯದ ಲೆಕ್ಕಾಚಾರದಲ್ಲಿ ದುಷ್ಪರಿಣಾಮಗಳ ವಿಚಾರವಾಗಿ ಆಡಳಿತ ವ್ಯವಸ್ಥೆಯು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸ್ಥಳಿಯವಾಗಿ ನಾನಾ ಸಮಸ್ಯೆಗಳ ಕಾಟ ಹೆಚ್ಚಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net