

ಶಿವಮೊಗ್ಗ: ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆ ಬಳಿಕ ‘ಮನದ ಕಡಲು’ ಸಿನಿಮಾ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು. ಮಹಾರಾಷ್ಟ್ರದಿಂದ ಕಾಸರಗೋಡುವರೆಗೆ ಕರಾವಳಿ ಭಾಗದ ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿ ಚಿತ್ರೀಕರಿಸಲಾಗಿದೆ. ಮಾ.28ಕ್ಕೆ ರಾಜ್ಯದ 100 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಮನದ ಕಡಲು ಸಿನಿಮಾ ಹತ್ತು ಹಲವು ವಿಶೇಷಗಳನ್ನು ಒಳಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹರಿಕೃಷ್ಣ ಸಂಗೀತದಲ್ಲಿ ಆರು ಹಾಡುಗಳಿವೆ. ಈಗಾಗಲೇ ನಾಲ್ಕು ಬಿಡುಗಡೆ ಆಗಿವೆ. ಮನದ ಕಡಲು ಬರೀ ಪ್ರೇಮಕಥೆಯಲ್ಲ, ಬದುಕು ಏನೆಂಬುದನ್ನು ತೋರಿಸಿಕೊಡಲಿದೆ. ಮುಂದಿನ ದಿನಗಳಲ್ಲಿ ನಾಲ್ಕು ಭಾಷೆಗಳಿಗೆ ರಿಮೇಕ್ ಆಗಲಿದೆ ಎಂದರು. ಇ.ಕೃಷ್ಣಪ್ಪ, ಜಿ.ಗಂಗಾಧರ್ ಚಿತ್ರವನ್ನು ನಿರ್ಮಾಣ ಮಾಡಿದ್ದು ಸುಮುಖ್, ರಾಶಿಕಾ ಶೆಟ್ಟಿ, ಅಂಜಲಿ ಹೊಸಮುಖಗಳನ್ನು ಪರಿಚಯಿಸಲಾಗಿದೆ. ಮನರಂಜನೆಯನ್ನು ಎಲ್ಲಿ ಬೇಕಾದರೂ ನೀಡಬಹುದು. ಆ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಆದರೆ ನಮಗೆ ಸಿನಿಮಾವೇ ಒಂದು ಪ್ರಪಂಚ ಎಂದು ಹೇಳಿದರು. ನಾಯಕ ಸುಮುಖ್ ಮಾತನಾಡಿ, ನನಗೆ ನಟನೆ ತುಂಬ ಇಷ್ಟ. ತಂದೆ ಶಶಿಕುಮಾರ್, ತಾಯಿ ನಂದಿತಾ ರಂಗಭೂಮಿ ಕಲಾವಿದರು. ನಾನು ಸಹ ಬೆಂಗಳೂರು, ಮುಂಬೈನಲ್ಲಿ ರಂಗಭೂಮಿ ತರಬೇತಿ ಪಡೆದಿದ್ದೇನೆ. ಬಾಲ್ಯದಲ್ಲಿ ಕನ್ನಡಿ ಮುಂದೆ ನಿಂತು ನಟನಾಗುವ ಕನಸು ಕಂಡಿದ್ದೆ. ಅದನ್ನು ಗಮನಿಸಿದ್ದ ತಂದೆ ನನಗೆ ಬೈದಿದ್ದರು. ನಟನೆಗೆ ಸಾಕಷ್ಟು ಮಾರ್ಗಗಳಿದ್ದು ಅಲ್ಲಿ ಪ್ರದರ್ಶನ ನೀಡಬೇಕು. ಅಲ್ಲಿವರೆಗೂ ನೀನು ನಟನಾಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಅದನ್ನೇ ಸವಾಲಾಗಿ ತೆಗೆದುಕೊಂಡು ರಂಗಭೂಮಿಯಲ್ಲಿ ತರಬೇತಿ ಪಡೆದು ಇಂದು ಕನ್ನಡ ಚಿತ್ರರಂಗದ ಮುಂದೆ ಬಂದಿದ್ದೇನೆ ಎಂದರು. ಶಿವಮೊಗ್ಗ ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.
ಇದು ನನ್ನ ಮೊದಲ ಸಿನಿಮಾ. ದೊಡ್ಡ ಬ್ಯಾನರ್‌ನಡಿ ಬೆಳ್ಳಿತೆರೆಗೆ ಕಾಲಿಟ್ಟಿದ್ದೇನೆ. ತುಂಬ ನಿರೀಕ್ಷೆ ಇದೆ. ಉತ್ತಮವಾದ ಲವ್ ಸ್ಟೋರಿ ಬಹಳ ದಿನಗಳ ಬಳಿಕ ಮೂಡಿಬಂದಿದೆ. ಮಕ್ಕಳಿಂದ ಹಿಡಿದು ಎಲ್ಲ ವರ್ಗದವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬಹುದು. - ರಾಶಿಕಾ ಶೆಟ್ಟಿ, ನಟಿ