ಮನಸ್ಸಿದ್ದರೆ ಮಾರ್ಗ; ಇವರು ಒಂಟಿ ಕಾಲಲ್ಲಿ ಕೈಮಗ್ಗ ತುಳಿತಾರೆ..!

hardwork
Published on

ಹುನಗುಂದ: ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಮಾನಸಿಕವಾಗಿ ಸದೃಢವಾಗಿದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಸಾಧಿಸಬಹುದು ಎಂದು ಅನೇಕರು ತೋರಿಸಿ ಕೊಟ್ಟಿದ್ದಾರೆ. ಅದೇ ರೀತಿ ಇಲ್ಲೊಬ್ಬ ನೇಕಾರ ತಮ್ಮ ನ್ಯೂನ್ಯತೆಯನ್ನು ಬದಿಗೊತ್ತಿ, ಒಂಟಿ ಕಾಲಿನಲ್ಲೆ ಕೈಮಗ್ಗದ ಎರಡು ಕಾಲ್ಪಡಿಗಳನ್ನು ತುಳಿಯುತ್ತ, ಕಳೆದ ಎರಡು ದಶಕಗಳಿಂದ ಸೀರೆ ನೇಯುತ್ತಾ, ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಹೀಗೆ ಒಂಟಿ ಕಾಲಿನ ಪಾದದಿಂದ ಒಂದು ಕಾಲ್ಪಡಿ ತುಳಿಯುತ್ತ, ಮತ್ತೊಂದು ಕಾಲ್ಪಡಿಯನ್ನು ಹಿಂಬುಡದಿಂದ ತುಳಿದು ಸೀರೆ ನೇಯುತ್ತಿರುವ ಇವರ ಹೆಸರು ಲಕ್ಷ್ಮಣ ಕಕ್ಕಣ್ಣವರ ಅಂತ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದವರು.

ಲಕ್ಷ್ಮಣ ಹುಟ್ಟು ಅಂಗವಿಕಲ. ಒಂದು ಕಾಲು ಶಕ್ತವಾಗಿದ್ದರೆ ಮತ್ತೊಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ವಿಕಲಚೇತನರಿಗೆ ಅನುಕೂಲವಾಗುವ ಸುಲಭ ಕೆಲಸಗಳು ಯಾವುವೂ ಲಕ್ಷ್ಮಣಗೆ ಸಿಗಲೇ ಇಲ್ಲ. ಇದರಿಂದ ಬದುಕಿನ ಬಂಡಿ ಸಾಗಿಸಲು ಅನಿವಾರ್ಯವಾಗಿ ವಂಶಪಾರಂಪರಿಕವಾಗಿ ಬಂದಿದ್ದ ನೇಕಾರಿಕೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

39 ವರ್ಷದ ಲಕ್ಷ್ಮಣ ಮದುವೆಯಾಗಿದ್ದು, ಪತ್ನಿ ಸಹ ಅಂಗವಿಕಲೆಯಾಗಿದ್ದು, ಪತಿಯ ಕೆಲಸದಲ್ಲಿ ಸಾತ್ ನೀಡುತ್ತ ಬಂದಿದ್ದಾರೆ. ಮೂವರು ಮಕ್ಕಳು ಇದ್ದು, ಅಣ್ಣನ ಜೊತೆ ಕೂಡು ಕುಟುಂಬದಲ್ಲಿ ವಾಸವಾಗಿದ್ದಾರೆ.

ಇನ್ನು ಲಕ್ಷ್ಮಣ ಕ್ರೀಡಾಪಟು ಕೂಡ. ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಅಂಗವಿಕಲ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮೂವರು ಮಕ್ಕಳಲ್ಲಿ ಹಿರಿಯ ಪುತ್ರನನ್ನು ಇಂಜಿನಿಯರಿಂಗ್ ಓದಿಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ನೇಕಾರಿಕೆ ಮಾಡುವುದು ಬಹಳ ಕಷ್ಟವಾಗಿದೆ. ಕಚ್ಚಾವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರೀ ಯೋಜನೆಗಳಿಗೆ ಅರ್ಹರಿದ್ದಾರೆ. ನೆತ್ತಿಗೊಂದು ಸೂರು ಕಟ್ಟಿಕೊಳ್ಳಲು ಜವಳಿ ಇಲಾಖೆಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಇವರಿಗೆ ಧನಸಹಾಯ ಸಿಕ್ಕಿಲ್ಲ ಎನ್ನುವುದು ದುಃಖಕರ ಸಂಗತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net