

ಮಂಗಳೂರು: ಕಾರಣಿಕದ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಕಿಡಿಗೇಡಿಯೊಬ್ಬ ಹುಚ್ಚು ಹಿಡಿದು ಸಾವನ್ನಪ್ಪಿದ ಕಾರಣ ಉಳಿದಿಬ್ಬರು ಪ್ರಾಣಭಯದಿಂದ ಕ್ಷೇತ್ರಕ್ಕೆ ಬಂದು ಕ್ಷಮೆಯಾಚಿಸಿದ ಘಟನೆ ನಗರದ ಎಮ್ಮೆಕೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಕಳೆದ ತಿಂಗಳು ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ಕಿಡಿಗೇಡಿಗಳು ಮೂತ್ರ ವಿಸರ್ಜನೆ ಮಾಡಿ ಮಲಿನಗೊಳಿಸಿದ್ದು ಸಹಸ್ರಾರು ಭಕ್ತಾದಿಗಳಿಗೆ ಬೇಸರವುಂಟು ಮಾಡಿತ್ತು. ಬುಧವಾರ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ರಾತ್ರಿ ಸುಮಾರು 10 ಗಂಟೆಗೆ ಆಗಮಿಸಿ ಕೊರಗಜ್ಜನ ಮುಂದೆ ಕಿಡಿಗೇಡಿಗಳು ತಪ್ಪು ಕೇಳಿದ್ದಾರೆ.
ಓರ್ವ ದುಷ್ಕರ್ಮಿ ಕೆಲ ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ. ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು ಕಿಡಿಗೇಡಿಗಳು ದೈವದ ಮುಂದೆ ಕ್ಷಮಾಪಣೆಗೆ ಮುಂದಾಗಿದ್ದಾರೆ. ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸಿರುವುದಾಗಿ ತಿಳಿದುಬಂದಿದೆ. ಕ್ಷಮಾಪಣೆ ಪ್ರಕ್ರಿಯೆ ಮುಗಿದ ಕೂಡಲೇ ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.