ಗಾಂಜಾ ಬೆಳೆದ ವ್ಯಕ್ತಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ

dist Court building
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Published on

ಶಿವಮೊಗ್ಗ: ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ಶುಂಠಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಹೆಚ್ಚುವರಿ ಸಜೆ ವಿಧಿಸಿ ಆದೇಶಿಸಿದೆ.

ಚಿಟ್ಟೂರು ಗ್ರಾಮದ ನಿಂಗರಾಜ(47) ಶಿಕ್ಷೆಗೆ ಒಳಗಾದವರು. ತಮ್ಮ ಶುಂಠಿ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೊರಬ ವಲಯ ಅಬಕಾರಿ ನಿರೀಕ್ಷಕರು 2022ರ ಸೆ.8ರಂದು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ 5ರಿಂದ 6 ಅಡಿ ಎತ್ತರದ ಗಿಡಗಳು ಹಾಗೂ 8ರಿಂದ 10 ಎತ್ತರದ ಗಾಂಜಾ ಗಿಡಗಳು ಸೇರಿ ಒಟ್ಟು 20 ಹಸಿ ಗಿಡಗಳನ್ನು ಜಪ್ತಿ ಮಾಡಿದ್ದರು. ಅಲ್ಲದೆ, 300 ಗ್ರಾಂ ಒಣ ಗಾಂಜಾವನ್ನು ಹೊಂದಿದ್ದರು. ಈ ಬಗ್ಗೆ ಎನ್‌ಡಿಪಿಎಸ್‌ನಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಆರೋಪ ಸಾಬೀತಾಗಿದ್ದರಿಂದ ನಿಂಗರಾಜಗೆ ಕಠಿಣ ಕಾರಾಗೃಹವಾಸ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಅಭಿಯೋಜಕ ಎ.ಎನ್.ಸುರೇಶ್‌ಕುಮಾರ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net