

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಶನಿವಾರ ಕುಡಿದ ಅಮಲಿನಲ್ಲಿ ಆಯತಪ್ಪಿ ಪಾಳುಬಾವಿಗೆ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಕನಕಪುರದಿಂದ ತಾಲೂಕಿನ ಎಂ.ಟಿ.ದೊಡ್ಡಿಯ ಸಂಬಂಧಿಕರ ಮನೆಗೆ ಆಗಮಿಸಿದ್ದ ಇವರು ಮದ್ಯದ ಅಮಲಿನಲ್ಲಿದ್ದರು. ಮಧ್ಯಾಹ್ನ 1ರ ವೇಳೆಯಲ್ಲಿ ಎಲ್ಲೇಮಾಳ ಗ್ರಾಮದ ಪಾಳುಬಾವಿಯ ಕಟ್ಟೆಯ ಮೇಲೆ ಕುಳಿತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ತಂಡ ಬಾವಿಯಿಂದ ಸುರಕ್ಷಿತವಾಗಿ ಮೇಲೆತ್ತಿದ್ದಾರೆ.